ADVERTISEMENT

ರೋಗಲಕ್ಷಣ ಇದ್ದರೆ ಕೋವಿಡ್‌ ಕೇರ್‌ ಸೆಂಟರ್‌: ಇಲ್ಲದಿದ್ದರೆ ಹೋಟೆಲ್‌, ಹಜ್‌ ಭವನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 11:54 IST
Last Updated 25 ಜೂನ್ 2020, 11:54 IST
ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರ   

ಬೆಂಗಳೂರು: ಕೋವಿಡ್‌ ರೋಗಲಕ್ಷಣ ಕಡಿಮೆ ಇರುವವರಿಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಹಾಗೂ ರೋಗಲಕ್ಷಣ ಇಲ್ಲದವರಿಗೆ ಖಾಸಗಿ ಹೋಟೆಲ್‌ಗಳು ಮತ್ತು ಹಜ್ ಭವನದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಗರದಲ್ಲಿ ಕೋವಿಡ್ 19 ಪರಿಸ್ಥಿತಿ ಪರಿಶೀಲನೆ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ತಪಾಸಣಾ ಪರೀಕ್ಷಾ ವರದಿ ಬಂದು, ಸೋಂಕು ದೃಢಪಟ್ಟರೆ ಅಂಥವರನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲು ಸದ್ಯ 100 ಆಂಬ್ಯುಲೆನ್ಸ್‌ಗಳು ಲಭ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಆಂಬುಲೆನ್ಸ್‌ಗಳನ್ನು ಈ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಗಿದೆ.

ADVERTISEMENT

ರೋಗಿಗಳು ಕಾಯುವ ಪರಿಸ್ಥಿತಿ ಬರಬಾರದು. ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸಚಿವರಿಗೆ ಸೂಚಿಸಲಾಯಿತು.

ಹಾಸಿಗೆಗಳ ಲಭ್ಯತೆ ಕುರಿತು, ಪ್ರತಿ ರೋಗಿಯ ದಾಖಲಿಸುವ ಕುರಿತು ಕ್ಷಣಕ್ಷಣದ ಮಾಹಿತಿ ಒದಗಿಸುವ ಕುರಿತು ಡಿಜಿಟಲ್ ಪ್ಲಾಟ್ ಫಾರ್ಮ್ ಸೃಜಿಸಲು ಕೂಡಾ ಸಭೆಯಲ್ಲಿ ನಿರ್ಧರಿಸಲಾಯಿತು. ಇಲಾಖೆಗಳು ಈ ನಿಟ್ಟಿನಲ್ಲಿ ಸಮನ್ವಯದಿಂದ ಕ್ರಮ ವಹಿಸುವಂತೆ ಸೂಚಿಸಲಾಯಿತು.

ರಾಜ್ಯದಲ್ಲಿ ಶೇ 61ರಷ್ಟು ಜನ ಗುಣಮುಖರಾಗಿದ್ದಾರೆ. 3,700 ಸಕ್ರಿಯ ಪ್ರಕರಣಗಳು ಇವೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸಚಿವರು, ಶಾಸಕರ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.