ADVERTISEMENT

ಕೊರೊನಾ ವೈರಸ್‌ ಸೋಂಕಿತರು ಪತ್ತೆಯಾದರೆ ಕಚೇರಿಗೆ 48 ಗಂಟೆ ಬೀಗ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 4:20 IST
Last Updated 11 ಜೂನ್ 2020, 4:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯಲ್ಲಿ ಕೊರೊನಾ ಸೋಂಕು ಪತ್ತೆಯಾದಲ್ಲಿ 48 ಗಂಟೆಗಳ ಕಾಲ ಕಚೇರಿಯನ್ನು ಬಂದ್ ಮಾಡಿ, ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕಚೇರಿಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಅಗತ್ಯ ಮುಂಜಾಗರೂಕ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಸೋಂಕಿತ ವ್ಯಕ್ತಿ ಸೀಮಿತ ಸ್ಥಳಗಳಲ್ಲಿ ಮಾತ್ರ ಸಂಚರಿಸಿದಲ್ಲಿ ಇಡೀ ಕಚೇರಿಯನ್ನು ಬಂದ್ ಮಾಡಬೇಕಾದ ಅಗತ್ಯವಿಲ್ಲ. ಸೋಂಕು ನಿವಾರಕದಿಂದಸಂಪೂರ್ಣ ಕಚೇರಿಯನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ವ್ಯಕ್ತಿ ವಿವಿಧೆಡೆ ಓಡಾಟ ನಡೆಸಿದ್ದಲ್ಲಿ ಅಥವಾ ಹಲವು ಮಂದಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಸಂಪೂರ್ಣ ಕಚೇರಿಯನ್ನು ಬಂದ್ ಮಾಡಬೇಕಾಗುತ್ತದೆ. ಈ ವೇಳೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಬೇಕು. ಗರ್ಭಿಣಿಯರು ಹಾಗೂ ವಯಸ್ಸಾದ ಉದ್ಯೋಗಿಗಳ ಮೇಲೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಕಚೇರಿಯಲ್ಲಿ ಸೂಕ್ತವಾಗಿ ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು. ಪ್ರತಿನಿತ್ಯ ಸೋಂಕು ನಿವಾರಕದಿಂದ ಕಚೇರಿಯನ್ನು ಸ್ವಚ್ಛ ಮಾಡಬೇಕು. ಉದ್ಯೋಗಿಗಳು ಪರಸ್ಪರ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಸೋಂಕು ಲಕ್ಷಣಗಳು ಗೋಚರಿಸಿದಲ್ಲಿ ಕೂಡಲೇ ಪರೀಕ್ಷೆಗೆ ಸೂಚಿಸಬೇಕು. ಕಚೇರಿಗೆ ಬರುವ ಸಂದರ್ಶಕರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಬೇಕು. ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಡುವುದು ಉತ್ತಮ. ಕಂಟೈನ್‌ಮೆಂಟ್‌ ವಲಯದ ಉದ್ಯೋಗಿಗಳು ಕಚೇರಿಗೆ ಬರುವುದು ಅಪಾಯ. ಹಾಗಾಗಿ ಅವರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಬೇಕು. ಸೋಂಕು ಲಕ್ಷಣಗಳು ಇಲ್ಲದ ಉದ್ಯೋಗಿಗಳು ಹಾಗೂ ಸಂದರ್ಶಕರಿಗೆ ಮಾತ್ರ ಕಚೇರಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ADVERTISEMENT

ಸಚ್ಛತೆ ಖಚಿತಪಡಿಸಿಕೊಳ್ಳಿ

* ಕೆಲಸದ ಸ್ಥಳದಲ್ಲಿ ನೆಲ, ಮೇಜು, ಕುರ್ಚಿ, ಕಂಪ್ಯೂಟರ್, ದೂರವಾಣಿ ಸೇರಿದಂತೆ ಬಳಕೆಯ ವಸ್ತುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು‌

* ಬೇರೆಯವರ ಕುರ್ಚಿ, ಕಂಪ್ಯೂಟರ್‌ಗಳನ್ನು ಬಳಕೆ ಮಾಡಬಾರದು

* ಕೆಲಸದ ಅವಧಿಯಲ್ಲಿ ಮುಖಗವಸುಗಳನ್ನು ಧರಿಸಿರಬೇಕು

* ಕಚೇರಿಯಲ್ಲಿ ವಿವಿಧೆಡೆ ಸ್ಯಾನಿಟೈಸರ್ ಇಟ್ಟಿರಬೇಕು

* ಅನಗತ್ಯವಾಗಿ ಪ್ರಯಾಣ ಮಾಡಬಾರದು

* ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು

* ಕನಿಷ್ಠ ಆರು ಅಡಿ ಅಂತರ ಕುಳಿತು ಕೆಲಸ ಮಾಡಬೇಕು

* ಸಭೆ ನಡೆಸುವಾಗ 10ಕ್ಕೂ ಅಧಿಕ ಮಂದಿ ಸೇರಬಾರದು

* ಲಿಫ್ಟ್‌ಗಳಲ್ಲಿ 2ರಿಂದ 4 ಮಂದಿ ಮಾತ್ರ ಹೋಗಬೇಕು

* ಮೆಟ್ಟಿಲುಗಳನ್ನು ಹತ್ತಿ ಹೋಗುವುದು ಉತ್ತಮ

* ಒಟ್ಟಾಗಿ ಕುಳಿತು ಊಟ, ತಿಂಡಿಗಳನ್ನು ಮಾಡಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.