ADVERTISEMENT

ಭಾರತೀಯ ಅರಣ್ಯ ಸೇವೆಯ ಐಎಫ್‌ಎಸ್‌: ರಾಜ್ಯದ ಸಾಧಕರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 21:10 IST
Last Updated 29 ಜೂನ್ 2022, 21:10 IST
ತಹಸೀನ್‌ ಬಾನು
ತಹಸೀನ್‌ ಬಾನು   

ಬೆಂಗಳೂರು: ಕೇಂದ್ರ ನಾಗರಿಕ ಸೇವಾ ಆಯೋಗವು (ಯುಪಿಎಸ್‌ಸಿ) ನಡೆಸಿದ್ದ ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಪರೀಕ್ಷೆಯಲ್ಲಿ ಬೆಂಗಳೂರಿನ ತರುಣ್ ಎಸ್‌. 19ನೇ ರ‍್ಯಾಂಕ್‌ ಪಡೆದಿದ್ದಾರೆ.

ಮೂರನೇ ಯತ್ನದಲ್ಲಿ ಅವರು ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಬಿ.ಇ.(ಎಲೆಕ್ಟ್ರಿಕಲ್‌) ಪದವಿ ಪಡೆದಿರುವ ಅವರು, ಸರ್ಕಾರೇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

‘ನನಗೆ ಅರಣ್ಯ ಮತ್ತು ಪ್ರಾಣಿಗಳ ಬಗ್ಗೆ ಅತೀವ ಆಸಕ್ತಿ ಮತ್ತು ಪ್ರೀತಿ. ಅರಣ್ಯ ಸೇವೆಯನ್ನು ಆಯ್ಕೆ ಮಾಡಿಕೊಳ್ಳಲು ಇದೇ ಪ್ರೇರಣೆ. ಈ ಗುರಿ ತಲುಪುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಂಡೆ’ ಎಂದು ತರುಣ್‌ ವಿವರಿಸಿದ್ದಾರೆ.

ADVERTISEMENT

‘ಮುಖ್ಯ ಪರೀಕ್ಷೆಯಲ್ಲಿ ಅರಣ್ಯ ಮತ್ತು ಭೂವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೆ. ಶಂಕರ್‌ ಐಎಎಸ್‌ನಲ್ಲಿ ಮಾರ್ಗದರ್ಶನ ಪಡೆದಿದ್ದೆ. ಆನ್‌ಲೈನ್‌ ಮೂಲಕ ನೀಡಿದ ಉಪನ್ಯಾಸಗಳು ಪರೀಕ್ಷೆಗಳು ನೆರವಾದವು. ಇಷ್ಟು ಉತ್ತಮ ರ‍್ಯಾಂಕಿಂಗ್‌ ಅನ್ನು ನಿರೀಕ್ಷಿಸಿರಲಿಲ್ಲ’ ಎಂದು ವಿವರಿಸಿದರು.

ತಹಸೀನ್‌ ಬಾನುಗೆ 8ನೇ ರ್‍ಯಾಂಕ್‌

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯ ನಿವಾಸಿ, ತಹಸೀನ್‌ ಬಾನು ದಾವಡಿ ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಪರೀಕ್ಷೆಯಲ್ಲಿ ದೇಶಕ್ಕೆ ಎಂಟನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇದಕ್ಕೂ ಮುಂಚೆ ಅವರು ಇತ್ತೀಚೆಗೆ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 482ನೇ ರ‍್ಯಾಂಕ್‌ ಗಳಿಸಿದ್ದರು.

‘ತಹಸೀನ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದಿರುವುದು ಖುಷಿ ತಂದಿದೆ. ರಾಜ್ಯದ ಅರಣ್ಯ ಇಲಾಖೆಯಲ್ಲಿಯೇ ಅವರು ನಿಯೋಜನೆಯಾಗುವ ಸಾಧ್ಯತೆಯಿದೆ’ ಎಂದು ತಹಸೀನ್‌ ಅವರ ಸಹೋದರ ಸಂಬಂಧಿ ಮಹ್ಮದ್‌ ಇಲಿಯಾಸ್‌ ಹೇಳಿದರು.

ತಹಸೀನ್‌ ಬಾನು ಅವರು ನೈರುತ್ಯ ರೈಲ್ವೆಯ ನಿವೃತ್ತ ಗಾರ್ಡ್ ಖಾದರ್ ಬಾಷಾ ಹಾಗೂ ಹಸೀನಾ ಬೇಗಂ ದಂಪತಿ ಪುತ್ರಿ. ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೇಶ್ವಾಪುರದ ಫಾತಿಮಾ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ವಿದ್ಯಾನಗರದ ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ (ಕೃಷಿ) ಅಧ್ಯಯನ ಮಾಡಿದ್ದಾರೆ.


ಎಸ್.ನವೀನ ಕುಮಾರಗೆ 62ನೇ ರ‍್ಯಾಂಕ್

ಕಾರವಾರ: ಕೇಂದ್ರ ನಾಗರಿಕ ಸೇವಾ ಆಯೋಗವು (ಯು.ಪಿ.ಎಸ್.ಸಿ) ಹಮ್ಮಿಕೊಂಡಿದ್ದ ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಪರೀಕ್ಷೆಯಲ್ಲಿ, ಅಂಕೋಲಾ ತಾಲ್ಲೂಕಿನ ಅಚವೆಯ ಎಸ್.ನವೀನ ಕುಮಾರ ಹೆಗಡೆ 62ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

‘ಅರಣ್ಯದಿಂದ ಕೂಡಿರುವ ಉತ್ತರ ಕನ್ನಡದ ಪರಿಸರವು, ನಾನು ಅರಣ್ಯ ಸೇವೆಗೆ ಸೇರಬೇಕು ಎಂದು ಪ್ರೇರೇಪಿಸಿತು. ನನ್ನ ಎತ್ತರವು ಕಡಿಮೆಯಾಗಿದ್ದ ಕಾರಣದಿಂದ ಈ ಮೊದಲು ಪರೀಕ್ಷೆ ಬರೆಯಲು ಅರ್ಹತೆ ಇರಲಿಲ್ಲ. ಆದರೆ, ಯು.ಪಿ.ಎಸ್.ಸಿ ಈಚೆಗೆ ಈ ನಿಯಮದಿಂದ ವಿನಾಯಿತಿ ನೀಡಿದೆ. ಇದು ಅನುಕೂಲವಾಯಿತು’ ಎಂದು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು. ಅಚವೆ ಸಮೀಪದ ಮೋತಿಗುಡ್ಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಳವಳ್ಳಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕುಮಟಾದ ಮೂರೂರು ಪ್ರಗತಿ ವಿದ್ಯಾಮಂದಿರದಲ್ಲಿ ಪ್ರೌಢಶಾಲೆ, ಬಳಿಕ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪಿ.ಯು ಅಧ್ಯಯನ ಮಾಡಿದ್ದರು. ನಂತರ, ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು.

‘ಯು.ಪಿ.ಎಸ್‌.ಸಿ ಪರೀಕ್ಷೆಗೆ 2017ರಲ್ಲಿ ದೆಹಲಿಯಲ್ಲಿ ತರಬೇತಿ ಪಡೆದಿದ್ದೆ. ಐದು ಬಾರಿ ನಾಗರಿಕ ಸೇವಾ ‍ಪರೀಕ್ಷೆಗಳನ್ನು ಬರೆದಿದ್ದೇನೆ. ಮೊದಲ ಪ್ರಯತ್ನದಲ್ಲಿ ಐ.ಎಫ್.ಎಸ್ ಉತ್ತೀರ್ಣನಾಗಿದ್ದೇನೆ’ ಎಂದು ತಿಳಿಸಿದರು. ಅವರ ತಂದೆ ಸೀತಾರಾಮ ಹೆಗಡೆ ಟೇಲರಿಂಗ್ ಮತ್ತು ಕೃಷಿ ಮಾಡುತ್ತಿದ್ದು, ತಾಯಿ ಲಲಿತಾ ಹೆಗಡೆ ಗೃಹಿಣಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.