ADVERTISEMENT

ತೋಟಗಾರಿಕೆ ಮೇಳ: ರೈತರನ್ನು ಉದ್ಯಮಿಯನ್ನಾಗಿಸುವ ಗುರಿ

ಐಐಎಚ್‌ಆರ್‌: 8ರಿಂದ 12ರವರೆಗೆ ಮೇಳ *ಭೌತಿಕ–ಆನ್‌ಲೈನ್ ವೀಕ್ಷಣೆಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 18:04 IST
Last Updated 5 ಫೆಬ್ರುವರಿ 2021, 18:04 IST
ಐಐಎಚ್‌ಆರ್‌ ಆವರಣದಲ್ಲಿ ಮೇಳಕ್ಕೆ ಸಜ್ಜಾಗಿರುವ ಪ್ರಾತ್ಯಕ್ಷಿಕೆಗಳು –ಪ್ರಜಾವಾಣಿ ಚಿತ್ರ
ಐಐಎಚ್‌ಆರ್‌ ಆವರಣದಲ್ಲಿ ಮೇಳಕ್ಕೆ ಸಜ್ಜಾಗಿರುವ ಪ್ರಾತ್ಯಕ್ಷಿಕೆಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಸರಘಟ್ಟದಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಪ್ರಾಂಗಣದಲ್ಲಿ ಫೆ.8ರಿಂದ 12ರವರೆಗೆ ಭೌತಿಕ ಮತ್ತು ಆನ್‌ಲೈನ್‌ ಮೂಲಕ ನಡೆಯಲಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

‘ರೈತರ ಆದಾಯ ದುಪ್ಪಟ್ಟುಗೊಳಿಸುವುದು ಹಾಗೂ ರೈತರು ತಮ್ಮ ವ್ಯವಸಾಯದಿಂದಲೇ ಉದ್ಯಮಿಗಳಾಗುವಂತೆ ಸಹಕಾರ ನೀಡುವುದು ಸಂಸ್ಥೆಯ ಹಾಗೂ ತೋಟಗಾರಿಕೆ ಮೇಳದ ಧ್ಯೇಯ’ ಎಂದುಐಐಎಚ್‌ಆರ್‌ ನಿರ್ದೇಶಕ ಎಂ.ಆರ್.ದಿನೇಶ್‌ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಕೊರೊನಾ ಇರುವುದರಿಂದ ಮೇಳದಲ್ಲಿ ಹೆಚ್ಚು ಜನಸಂದಣಿಯಾಗದಂತೆ ತಡೆಯಲು ಈ ಬಾರಿ ಆನ್‌ಲೈನ್‌ ಹಾಗೂ ಭೌತಿಕವಾಗಿಯೂ ತೋಟಗಾರಿಕೆ ಮೇಳ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿದೆ. ಭೌತಿಕವಾಗಿ ಸೀಮಿತ ಜನರಿಗೆ ಮಾತ್ರ ವೀಕ್ಷಣೆಗೆ ಅವಕಾಶ ಇರಲಿದೆ. ಆದರೆ, ಆನ್‌ಲೈನ್‌ ವೇದಿಕೆ ದೇಶದಾದ್ಯಂತ ಇರುವ ಎಲ್ಲ ರೈತರನ್ನು ತಲುಪಲಿದೆ’ ಎಂದು ವಿವರಿಸಿದರು.

ADVERTISEMENT

‘ಈ ಬಾರಿ ಮೇಳದಲ್ಲಿ ಭಾಗವಹಿಸಲು ರೈತರಿಗೆ ಮಾತ್ರ ಅವಕಾಶ ನೀಡಲಾಗಿದ್ದು,ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು.‘ನವೋದ್ಯಮ ಮತ್ತು ಸದೃಢ ಭಾರತಕ್ಕೆ ತೋಟಗಾರಿಕೆ’ ಧ್ಯೇಯವಾಕ್ಯದಡಿ ನಡೆಯಲಿರುವ ಭೌತಿಕ ಹಾಗೂ ಆನ್‌ಲೈನ್‌ ಮೇಳವನ್ನುಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಲಿದ್ದು, 25 ಲಕ್ಷ ಮಂದಿ ಮೇಳದಲ್ಲಿ ವೀಕ್ಷಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.

‘ಸಂಸ್ಥೆ ಅಭಿವೃದ್ಧಿ ಪಡಿಸಿರುವ ತಳಿಗಳನ್ನು ದೇಶದ 23 ರಾಜ್ಯಗಳಲ್ಲಿ ರೈತರು ಬೆಳೆಯುತ್ತಿದ್ದಾರೆ. ಸೀತಾಫಲ, ಸೀಬೆ, ಟೊಮೆಟೊ, ಅರ್ಕಾ ಪ್ರಜ್ವಲ್ ಸುಗಂಧರಾಜ ಹೂವು, ಸೋರೆಕಾಯಿಯಂತಹಸಂಸ್ಕರಣೆಗೆ ಯೋಗ್ಯವಾದ ಹಲವು ತಳಿಗಳನ್ನು ಈ ಬಾರಿ ಅಭಿವೃದ್ಧಿಪಡಿಸಲಾಗಿದೆ. ಇವುರೈತರನ್ನುಮೇಳದಲ್ಲಿ ಹೆಚ್ಚು ಆಕರ್ಷಿಸಲಿವೆ’ ಎಂದು ಮಾಹಿತಿ ನೀಡಿದರು.

ಸಮಗ್ರ ಬೆಳೆಪದ್ದತಿಗೆ ಉತ್ತೇಜನ: ‘ರೈತರುಒಂದೇ ಬೆಳೆಯನ್ನು ಅವಲಂಬಿಸದೆ, ಸಮಗ್ರ ಬೆಳೆ ಪದ್ದತಿಗೆ ಉತ್ತೇಜಿಸಿ, ಆದಾಯ ದ್ವಿಗುಣಗೊಳಿಸುವ ಕ್ರಮಕ್ಕೆ ಸಂಸ್ಥೆ ಒತ್ತು ನೀಡಲಿದೆ.ಮಾವಿನ ತೋಟದಲ್ಲೇ ವಿವಿಧ ತರಕಾರಿಗಳನ್ನು ಬೆಳೆಯುವ ವಿಧಾನ ಹಾಗೂ ಆದಾಯ ಹೆಚ್ಚಿಸಿಕೊಳ್ಳುವ ಕುರಿತು ಮೇಳದಲ್ಲಿ ಮಾಹಿತಿ ನೀಡಲಿದ್ದೇವೆ’ ಎಂದು ಹೇಳಿದರು.

ಆನ್‌ಲೈನ್ ಸೀಡ್ ಪೋರ್ಟಲ್ ಯಶಸ್ವಿ: ‘ಐಐಎಚ್‌ಆರ್‌ ವತಿಯಿಂದ ದೇಶದ ಮೂಲೆ ಮೂಲೆಯ ರೈತರಿಗೆ ಬೇಕಾದ ಅಗತ್ಯ ಬೀಜಗಳನ್ನು ಆನ್‌ಲೈನ್‌ ಮೂಲಕ ತಲುಪಿಸುವ ‘ಸೀಡ್ ಪೋರ್ಟಲ್’ ಯೋಜನೆಗೆ ಚಾಲನೆ ನೀಡಲಾಗಿತ್ತು. ಪೋರ್ಟಲ್ ಮೂಲಕ 40 ತರಕಾರಿ ಹಾಗೂ ಹೂ ಬೆಳೆಗಳ ಬೀಜಗಳನ್ನು ಕಡಿಮೆ ದರದಲ್ಲಿ ಪೂರೈಸಲಾಗುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ಆರಂಭಗೊಂಡು ಈಗಿನವರೆಗೆ ₹70 ಲಕ್ಷ ವಹಿವಾಟು ನಡೆದಿದೆ. ರೈತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ವರ್ಷ ಗರಿಷ್ಠ 50 ಟನ್ ಬೀಜ ಮಾರಾಟ ಮಾಡುವ ಗುರಿ ಇದೆ’ ಎಂದು ದಿನೇಶ್ ಮಾಹಿತಿ ನೀಡಿದರು.

ಪ್ರಧಾನ ಕೃಷಿ ವಿಜ್ಞಾನಿ ಎಂ.ಎ.ಧನಂಜಯ್,‘ಈ ಮೇಳದಲ್ಲಿ ತೋಟಗಾರಿಕೆಯನ್ನು ಉದ್ಯಮವಾಗಿ ಉತ್ತೇಜಿಸಲು ವಿಶೇಷ ಆಸಕ್ತಿ ವಹಿಸಲಾಗಿದೆ. ರೈತರು ಸಂಕಷ್ಟವನ್ನೇ ಹೆಚ್ಚು ಕಂಡಿದ್ದಾರೆ.ತೋಟಗಾರಿಕೆಯನ್ನು ಒಂದು ಉದ್ಯಮವನ್ನಾಗಿ ಸ್ವೀಕರಿಸಲು ಇಚ್ಛಿಸುವವರಿಗೆ ಮೇಳದಿಂದ ಎಲ್ಲ ರೀತಿಯ ಸಲಹೆ-ಸಹಕಾರ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.