ADVERTISEMENT

ಗಣಿ ಅಕ್ರಮ: ‘ಬಿ’ ವರದಿ ವಾಪಸ್: ಸಿದ್ದರಾಮಯ್ಯ ಹೇಳಿಕೆ

ಬೊಕ್ಕಸಕ್ಕೆ ₹78,245 ಕೋಟಿ ನಷ್ಟ: ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 21:14 IST
Last Updated 22 ಆಗಸ್ಟ್ 2025, 21:14 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ‘ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯ 29 ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಕಿದ್ದ ‘ಬಿ’ ಅಂತಿಮ ವರದಿಗಳನ್ನು ವಾಪಸ್ ಪಡೆಯಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ವಿಧಾನಸಭೆಯ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ​ವಿಶೇಷ ತನಿಖಾ ತಂಡವು ಎಂಟು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸಿದೆ. ನ್ಯಾಯಾಲಯದ ಅನುಮತಿ ದೊರಕದಿರುವ ಈ ಪ್ರಕರಣಗಳ ವರದಿಯನ್ನು ನ್ಯಾಯಾಲಯದಿಂದ ಹಿಂಪಡೆಯಲು ತೀರ್ಮಾನಿಸಲಾಗಿದೆ’ ಎಂದರು.

ADVERTISEMENT

‘ಅರಣ್ಯ ಇಲಾಖೆಗೆ ಆಗಿರುವ ನಷ್ಟವನ್ನು ಅಂದಾಜಿಸಲು, ಪ್ರಕರಣವಾರು ತನಿಖಾ ತಂಡಗಳನ್ನು ರಚಿಸಲಾಗುವುದು. ಸಿಬಿಐಗೆ ಹಸ್ತಾಂತರವಾದ ಪ್ರಕರಣಗಳಲ್ಲಿ 10 ವರ್ಷಗಳ ನಂತರವೂ ತನಿಖೆ ಪೂರ್ಣಗೊಳ್ಳದ ಪ್ರಕರಣಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು, ಇಲ್ಲವೇ, ಎಸ್‌ಐಟಿ ತನಿಖೆಗೆ ಒಳಪಡಿಸಲು ವಾಪಸ್‌ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು’ ಎಂದು ಮಾಹಿತಿ ನೀಡಿದರು.

‘2006ರಿಂದ 2011ರವರೆಗೆ ನಡೆದಿದ್ದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತವು, 19.07 ಕೋಟಿ ಟನ್ ಅಕ್ರಮವಾಗಿ ಸಾಗಣೆ ಮಾಡಲಾಗಿದ್ದು, ಸರ್ಕಾರಕ್ಕೆ ಅಂದಾಜು ₹12,228 ಕೋಟಿ ನಷ್ಟವಾಗಿತ್ತು ಎಂದು ಅಂದಾಜಿಸಲಾಗಿತ್ತು. ಸಚಿವ ಸಂಪುಟ ಉಪಸಮಿತಿಯು ಒಟ್ಟು, ₹78,245 ಕೋಟಿ ನಷ್ಟವಾಗಿದೆ ಹೇಳಿದೆ. ಉಪ ಸಮಿತಿಯ ಶಿಫಾರಸುಗಳನ್ನು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂಗೀಕರಿಸಲಾಗಿದೆ. 29 ಪ್ರಕರಣಗಳಿಗೆ ನೀಡಿದ ‘ಬಿ’ ಅಂತಿಮ ವರದಿಯಲ್ಲಿ ದಾಖಲಿಸಿರುವ ಕಾರಣಗಳು ಮೇಲುನೋಟಕ್ಕೆ ಸಮಂಜಸವಾಗಿಲ್ಲ ಎನ್ನುವುದು ಕಂಡುಬಂದಿದ್ದು, ಮರುಪರಿಶೀಲಿಸಲು ನಿರ್ಧರಿಸಲಾಗಿದೆ’ ಎಂದರು. 

‘ಅಕ್ರಮದಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ವ್ಯಾಪಾರಸ್ಥರು, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಶಾಮೀಲಾಗಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದರು. ಹಿಂದೆ ಕಾಂಗ್ರೆಸ್‌ ಆಡಳಿತ ಇದ್ದಾಗ ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಸರ್ಕಾರ ಬದಲಾದ ನಂತರ ವಸೂಲಾತಿ ಕ್ರಮಗಳಿಗೆ ಹಿನ್ನಡೆಯಾಗಿತ್ತು. ಅದಕ್ಕಾಗಿಯೇ ಕಾನೂನು ಸಚಿವ ಎಚ್‌.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಂಪುಟ ಉಪ ಸಮಿತಿ ರಚಿಸಲಾಗಿತ್ತು’ ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.