ADVERTISEMENT

ಮಂಡ್ಯ: ಕೈಕುಳಿಯಿಂದ ಮೆಗ್ಗರ್‌ ಸ್ಫೋಟದವರೆಗೆ ಬೇಬಿಬೆಟ್ಟ!

ಕಲ್ಲು ಒಡೆಯುತ್ತಿದ್ದ ಗ್ರಾಮಸ್ಥರು ಈಗ ಗಣಿ ಕಾರ್ಮಿಕರು

ಎಂ.ಎನ್.ಯೋಗೇಶ್‌
Published 9 ಜುಲೈ 2021, 20:20 IST
Last Updated 9 ಜುಲೈ 2021, 20:20 IST
ಬೇಬಿಬೆಟ್ಟ ಗಣಿಗಾರಿಕೆ ಪ್ರದೇಶದ ಚಿತ್ರಣ
ಬೇಬಿಬೆಟ್ಟ ಗಣಿಗಾರಿಕೆ ಪ್ರದೇಶದ ಚಿತ್ರಣ   

ಮಂಡ್ಯ: ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ಎಂಟು ದಶಕಗಳ ಹಿಂದೆ ಕೈಕುಳಿ ಮೂಲಕ ಆರಂಭಗೊಂಡ ಕಲ್ಲು ಗಣಿ ಚಟುವಟಿಕೆಯ ಹಾದಿ ಇಂದಿನ ಅತ್ಯಾಧುನಿಕ ಮೆಗ್ಗರ್‌ ಸ್ಫೋಟದವರೆಗೆ ಅಪಾರ ಪ್ರಮಾಣದ ಪ್ರಕೃತಿ ಸಂಪತ್ತು ನಾಶಗೊಳಿಸಿದೆ.

ಕೆಆರ್‌ಎಸ್‌ ಜಲಾಶಯ ನಿರ್ಮಾಣಕ್ಕಾಗಿ ಕಲ್ಲು ಒಡೆಯಲು ತಮಿಳುನಾಡು, ಆಂಧ್ರಪ್ರದೇಶದಿಂದ ಭೋವಿ ಸಮಾಜದ ಕಾರ್ಮಿಕರನ್ನು ಕರೆತರಲಾಗಿತ್ತು. ಜಲಾಶಯ ನಿರ್ಮಾಣದ ನಂತರ ಇಲ್ಲಿಯೇ ಉಳಿದ ಅವರಿಗೆ ಮೈಸೂರು ಮಹಾರಾಜರು ಬೇಬಿಬೆಟ್ಟದ ಬಳಿ ಭೂಮಿ ಮಂಜೂರು ಮಾಡಿ, ಬದುಕಿಗೆ ಬೆಟ್ಟದ ವ್ಯಾಪ್ತಿಯಲ್ಲಿ ಕೈಕುಳಿ ನಡೆಸಲು ಅರೆಗುತ್ತಿಗೆ ನೀಡಿದ್ದರು.

ನಾಲ್ಕು ತಲೆಮಾರುಗಳಿಂದ ಬೇಬಿ ಬೆಟ್ಟದ ಸಮೀಪದ ‘ಕಾವೇರಿಪುರ’ ಗ್ರಾಮದಲ್ಲಿರುವ ಅವರ ಬಳಿ ರಾಜರು ಕೊಟ್ಟ ದಾನಪತ್ರಗಳು ಈಗಲೂ ಇವೆ. ಆದರೆ ಕೈಕುಳಿ ಮಾಯವಾಗಿದ್ದು ದೊಡ್ಡ ಗಣಿ ಯಂತ್ರಗಳು ಬಂದಿವೆ. ಕಲ್ಲುಕುಟಿಗರು ಈಗ ಗಣಿ ಕಾರ್ಮಿಕರಾಗಿದ್ದಾರೆ.

ADVERTISEMENT

ಶ್ರೀರಂಗಪಟ್ಟಣ, ನಾಗಮಂಗಲ ತಾಲ್ಲೂಕಿನ ಗಣಿಗಾರಿಕೆಗಿಂತ ಬೇಬಿಬೆಟ್ಟದ ಗಣಿಗಾರಿಕೆ ಈಗ ಚರ್ಚೆಯ ಕೇಂದ್ರ. ಕಾರಣ– ಕೆಆರ್‌ಎಸ್‌ ಜಲಾಶಯ. ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿಸ್ಫೋಟದಿಂದ 8 ಕಿ.ಮೀ ದೂರದ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆ ಇದೆ ಎಂಬ ಅಭಿಪ್ರಾಯದಶಕದ ಹಿಂದೆಯೇ ಕೇಳಿಬಂದಿತ್ತು. ಆದರೆಅಧಿಕೃತವಾಗಿ ಅಧ್ಯಯನ ನಡೆದಿರಲಿಲ್ಲ.

2018ರಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಡೆಸಿದ ಅಧ್ಯಯನದಲ್ಲಿ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿ ಸ್ಫೋಟದಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಕೆಆರ್‌ಎಸ್‌ ಬಳಿಯ ‘ಉಪಗ್ರಹ ಆಧಾರಿತ ಭೂಕಂಪ ಭೂಮಾಪನ ಜಾಲ ಕೇಂದ್ರ’ದಲ್ಲಿ ದಾಖಲಾದ ಮಾಹಿತಿ ಅನ್ವಯ ಈ ನಿರ್ಧಾರಕ್ಕೆ ಬರಲಾಗಿತ್ತು. ಅಲ್ಲಿಂದ ಗಣಿಗಾರಿಕೆ ನಿಷೇಧದ ಕೂಗು ಆರಂಭವಾಯಿತು.

’2 ವರ್ಷಗಳಿಂದೀಚೆಗೆ 20ಕ್ಕೂ ಹೆಚ್ಚು ಬಾರಿ ಬೇಬಿಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಆದರೆ ಎಲ್ಲವೂ ತಾತ್ಕಾಲಿಕ. ಶಾಶ್ವತ ನಿಷೇಧ ಹೇರಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಿಷೇಧಾಜ್ಞೆ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆ. ಬಹುತೇಕ ಗಣಿ ಕಂಪನಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಸೇರಿದ್ದು, ನಿಷೇಧ ಸಾಧ್ಯವಾಗುತ್ತಿಲ್ಲ’ ಎಂದು ಹೋರಾಟಗಾರರು ಆರೋಪಿಸುತ್ತಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ಅನ್ವಯ ಬೇಬಿಬೆಟ್ಟದಲ್ಲಿ 32 ಕ್ರಷರ್‌ಗಳಿಗೆ 68 ಕಡೆ ಗಣಿ ಗುತ್ತಿಗೆ ನೀಡಲಾಗಿತ್ತು. ಈಗ 30 ಗಣಿಗಳ ಅನುಮತಿ ರದ್ದು ಮಾಡಲಾಗಿದೆ. 2ಕ್ಕೆ ಮಾತ್ರ ಚಟುವಟಿಕೆ ನಡೆಸಲು ಅನುಮತಿ ಇದೆ.

500 ಕ್ರಷರ್ ಅಕ್ರಮ
‌’ಬೇಬಿಬೆಟ್ಟವೊಂದರಲ್ಲೇ 500 ಕ್ರಷರ್‌ಗಳು ಅಕ್ರಮವಾಗಿ ಚಟುವಟಿಕೆ ನಡೆಸುತ್ತಿವೆ. ಸ್ಥಳೀಯ ಪ್ರಭಾವಿಗಳು 2–3 ಎಕರೆಯಲ್ಲಿ ಅನುಮತಿ ಪಡೆದು ನೂರಾರು ಎಕರೆಯಲ್ಲಿ ಕಲ್ಲು ಸ್ಫೋಟ ನಡೆಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ನಿಷೇಧದ ನಡುವೆಯೂ ಗಣಿಗಾರಿಕೆ ವ್ಯಾಪಕವಾಗಿದ್ದು, ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿಕೆ ನೀಡಿದ ನಂತರ ಈಗ ಗಣಿಗಾರಿಕೆ ನಿಲ್ಲಿಸಲಾಗಿದೆ’ ಎಂದು ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯರು ತಿಳಿಸಿದರು.

ಸುಳ್ಳುಸುದ್ದಿ ಸೃಷ್ಟಿಸಿದ ಗೊಂದಲ
‘ಕೆಆರ್‌ಎಸ್‌ನಲ್ಲಿ ಕ್ರಸ್ಟ್‌ಗೇಟ್‌ ಬದಲಾವಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವೇಳೆ ಗೇಟ್‌ನ ಕಲ್ಲುಗಳನ್ನು ತೆಗೆಯಲಾಗಿತ್ತು. ಕಿಡಿಗೇಡಿಗಳು ಅದರ ವಿಡಿಯೊ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ, ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ಸುದ್ದಿ ಹರಡಿಸಿದ್ದರು. ಸುಳ್ಳುಸುದ್ದಿಯಿಂದಾಗಿಯೇ ಗೊಂದಲ ಸೃಷ್ಟಿಯಾಗಿದೆ’ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.