ADVERTISEMENT

ಅಕ್ರಮ ವಲಸಿಗರ ಬಗ್ಗೆ ಅಧ್ಯಯನ: ಕುಮಾರ್ ಬಂಗಾರಪ್ಪ

ಯತ್ನಾಳ್ ಬಣದ ಕುಮಾರ್ ಬಂಗಾರಪ್ಪ ನೇತೃತ್ವ * ರಾಜ್ಯದಲ್ಲಿ ಅಂದಾಜು 40 ಲಕ್ಷ ಅಕ್ರಮ ವಲಸಿಗರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 14:14 IST
Last Updated 21 ಫೆಬ್ರುವರಿ 2025, 14:14 IST
ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ   

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ರಾಜ್ಯದಲ್ಲಿ ನೆಲಸಿರುವ ಅಕ್ರಮ ವಲಸಿಗರ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. 

ಈ ಹಿಂದೆ ಅವರು ವಕ್ಫ್‌ ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಅಧ್ಯಯನ ನಡೆಸಿ, ವರದಿಯೊಂದನ್ನು ವಕ್ಫ್‌ ಕುರಿತ ಸಂಸತ್ತಿನ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿದ್ದರು. ಯತ್ನಾಳ ಬಣದ ಶಾಸಕರು ಮತ್ತು ನಾಯಕರು ಈ ಕಾರ್ಯದಲ್ಲಿ ಕೈಜೋಡಿಸಿದ್ದೂ ಅಲ್ಲದೇ, ಹೋರಾಟವನ್ನು ರೂಪಿಸಿ ವಿಜಯೇಂದ್ರ ಬಣಕ್ಕೆ ಯತ್ನಾಳ ಸಡ್ಡು ಹೊಡೆದಿದ್ದರು.

ಇದೀಗ ಅಕ್ರಮ ವಲಸಿಗರ ಕುರಿತು ಅಧ್ಯಯನ ನಡೆಸಲು ಅವರು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ರಾಜ್ಯದಲ್ಲಿ ಸುಮಾರು 40 ಲಕ್ಷದಷ್ಟು ವಿವಿಧ ದೇಶಗಳ ಅಕ್ರಮ ವಲಸಿಗರಿದ್ದಾರೆ. ಇವರು ರಾಜ್ಯ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಮ್ಮ ತೆರಿಗೆ ಹಣ ಇವರಿಗಾಗಿ ಪೋಲಾಗುತ್ತಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅಕ್ರಮ ವಲಸಿಗರ ಬಗ್ಗೆ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ನಾವೂ ಈ ಸಮಸ್ಯೆಯತ್ತ ಗಮನಹರಿಸಲೇಬೇಕಾಗಿದೆ’ ಎಂದರು.

ADVERTISEMENT

‘ಬೆಂಗಳೂರು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ವಲಸಿಗರು ನೆಲಸಿದ್ದಾರೆ. ಅಕ್ರಮ ವಲಸೆ ತಡೆಯಲು ಸರ್ಕಾರಗಳು ಪರಿಣಾಮಕಾರಿಯಾಗಿ ಕೆಲಸ ಆಗಲೇಬೇಕಾಗಿದೆ. ಅಕ್ರಮ ವಲಸಿಗರ ಹೆಸರಲ್ಲಿ ಸಮಾಜ ಘಾತುಕ ಮತ್ತು ಭಾರತ ವಿರೋಧಿ ಶಕ್ತಿಗಳೂ ಬಂದು ‘ಸ್ಲೀಪರ್‌ ಸೆಲ್‌’ ಆಗಿ ಬೇರು ಬಿಟ್ಟಿದ್ದಾರೆ. ಈ ಬಗ್ಗೆ ಮೌನ ವಹಿಸಿಕೊಂಡು ಕೂತರೆ ಮುಂದೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ಇದು ದೇಶದ ಆರ್ಥಿಕ, ಸಾಮಾಜಿಕ ಮತ್ತು ಭದ್ರತೆಯ ವಿಷಯವಾಗಿದೆ. ಆದ್ದರಿಂದ, ಈ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಅಧ್ಯಯನ ನಡೆಸಲು ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಪ್ರಯತ್ನಕ್ಕೆ ಬೇರೆ ನಾಯಕರು ಕೈಜೋಡಿಸಬಹುದು’ ಎಂದು ಅವರು ಹೇಳಿದರು.

‘ಅಧ್ಯಯನ ನಡೆಸಿದ ಬಳಿಕ ವರದಿ ತಯಾರಿಸಿ ಸರ್ಕಾರಗಳಿಗೆ ಸಲ್ಲಿಸಬೇಕೆ ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆಳವಾದ ಅಧ್ಯಯನ ಮಾಡುವುದಷ್ಟೇ ನನ್ನ ಗುರಿ’ ಎಂದು ಕುಮಾರ್ ಬಂಗಾರಪ್ಪ ಹೇಳಿದರು.

ದೇಶದ ಸುರಕ್ಷತೆ ಭದ್ರತೆ ದೃಷ್ಟಿಯಿಂದ ಆಳವಾದ ಅಧ್ಯಯನ ಮಾಡಲಾಗುವುದು. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ
ಕುಮಾರ್ ಬಂಗಾರಪ್ಪ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.