ADVERTISEMENT

‘ಕೆಪಿಐಡಿ’ ಕಾಯ್ದೆ ನೆರವು ಕೋರಿದ ಎಸ್‌ಐಟಿ

‘ಐಎಂಎ ಸಮೂಹ’ ಕಂಪನಿ ವಿರುದ್ಧ 35,218 ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:05 IST
Last Updated 16 ಜೂನ್ 2019, 20:05 IST
ಶಿವಾಜಿನಗರದ ಕಲ್ಯಾಣ ಮಂಟಪವೊಂದರಲ್ಲಿ ಪೊಲೀಸರು ತೆರೆದಿರುವ ಕೌಂಟರ್‌ನಲ್ಲಿ ಭಾನುವಾರ ರಾತ್ರಿ ಕೆಲ ಹೂಡಿಕೆದಾರರು ದೂರು ಸಲ್ಲಿಸಿದರು – ಪ್ರಜಾವಾಣಿ ಚಿತ್ರ
ಶಿವಾಜಿನಗರದ ಕಲ್ಯಾಣ ಮಂಟಪವೊಂದರಲ್ಲಿ ಪೊಲೀಸರು ತೆರೆದಿರುವ ಕೌಂಟರ್‌ನಲ್ಲಿ ಭಾನುವಾರ ರಾತ್ರಿ ಕೆಲ ಹೂಡಿಕೆದಾರರು ದೂರು ಸಲ್ಲಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾವಿರಾರು ಜನರಿಂದ ಷೇರು ಸಂಗ್ರಹಿಸಿ ವಂಚಿಸಿರುವ ‘ಐಎಂಎ ಸಮೂಹ ಕಂಪನಿ’ ವಿರುದ್ಧ‘ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡೆಪಾಸಿಟ್ ಫೈನಾನ್ಶಿಯಲ್’ (ಕೆಪಿಐಡಿ) ಅಡಿ ಪ್ರಕರಣ ದಾಖಲಿಸಿಕೊಳ್ಳಲು ಚಿಂತನೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು, ಆ ಬಗ್ಗೆ ಕಾನೂನು ತಜ್ಞರ ನೆರವು ಕೋರಿದ್ದಾರೆ.

ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಕಂಪನಿಯ ಪ್ರಧಾನ ಕಚೇರಿ ಇದೇ 5ರಿಂದ ಬಂದ್ ಆಗಿದ್ದು, ಹಣ ಹೂಡಿಕೆ ಮಾಡಿದ್ದ ಜನ ಕಂಗಾಲಾಗಿದ್ದಾರೆ. ಕಂಪನಿ ವಿರುದ್ಧ ಗುತ್ತಿಗೆದಾರ ಮೊಹಮ್ಮದ್ ಖಾಲಿದ್ ಅಹಮ್ಮದ್ ಅವರೇ ಮೊದಲಿಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಕಂಪನಿ ಮಾಲೀಕ ಮನ್ಸೂರ್ ಖಾನ್ ಹಾಗೂ ಇತರರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ದಿನ ಕಳೆದಂತೆ ವಂಚಿತ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಿದೆ. ಹೀಗಾಗಿ ತನಿಖೆ ಚುರುಕುಗೊಳಿಸಿರುವ ಎಸ್ಐಟಿ, ಕಂಪನಿಯ ನಿರ್ದೇಶಕರ ಮನೆ ಮೇಲೂ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ. ಆ ದಾಖಲೆಗಳನ್ನು ಪುರಾವೆಗಳನ್ನಾಗಿ ಪರಿಗಣಿಸಿ ಕೆಪಿಐಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಸದ್ಯದಲ್ಲೇ ನ್ಯಾಯಾಲಯದ ಅನುಮತಿ ಕೋರಲಿದೆ ಎಂದು ಗೊತ್ತಾಗಿದೆ.

ADVERTISEMENT

ಆಳವಾದ ತನಿಖೆ ಅಗತ್ಯ: ‘ಇದೊಂದು ವಿಶೇಷ ಹಾಗೂ ಸವಾಲಿನ ಪ್ರಕರಣವಾಗಿದೆ. ಹೂಡಿಕೆದಾರರಿಗೆ ವಂಚನೆಯಾಗಿದ್ದು, ಆಳವಾದ ತನಿಖೆ ನಡೆಸಿ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ಹಣ ವಾಪಸ್‌ ಕೊಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

‘ಗುತ್ತಿಗೆದಾರ ಖಾಲಿದ್ ಅಹಮ್ಮದ್ ಅವರ ದೂರಿನಲ್ಲಿ, ಹಣ ಹೂಡಿಕೆ ಮಾಡಿದ್ದು ಹಾಗೂ ತಮಗೆ ವಂಚನೆ ಆದ ಬಗ್ಗೆ ಮಾತ್ರ ಉಲ್ಲೇಖಿಸಿದ್ದರು. ಹೀಗಾಗಿ ಪೊಲೀಸರು, ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪದಡಿ ಮಾತ್ರ ಎಫ್‌ಐಆರ್ ಮಾಡಿಕೊಂಡಿದ್ದರು. ಕೆಪಿಐಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಬೇಕಾದ ಅಂಶಗಳು ದೂರಿನಲ್ಲಿ ಇರಲಿಲ್ಲವೆಂದು ಆ ಕಾಯ್ದೆಯ ಪ್ರಸ್ತಾಪವನ್ನು ಕೈಬಿಟ್ಟಿದ್ದರು’ ಎಂದರು.

‘ಈಗ ನಾವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದೇವೆ. ಅದನ್ನೇ ನ್ಯಾಯಾಲಯದ ಗಮನಕ್ಕೂ ತರಲಿದ್ದೇವೆ. ಒಪ್ಪಿಗೆ ಸಿಗುತ್ತಿದ್ದಂತೆ ಕೆಪಿಐಡಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ’ ಎಂದು ಹೇಳಿದರು.

35,218 ದೂರು ದಾಖಲು: ಕಂಪನಿ ವಿರುದ್ಧ ಭಾನುವಾರದ ಅಂತ್ಯಕ್ಕೆ 35,218 ದೂರುಗಳು ದಾಖಲಾಗಿವೆ.

ಭಾನುವಾರ ರಜೆ ದಿನವಾದರೂ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದವರು ಸೇರಿ 1,618 ಮಂದಿ ಕಮರ್ಷಿಯಲ್ ಸ್ಟ್ರೀಟ್‌ ಪೊಲೀಸರು ತೆರೆದಿರುವ ಕೌಂಟರ್‌ಗಳಿಗೆ ಬಂದು ದೂರು ಕೊಟ್ಟು ಹೋಗಿದ್ದಾರೆ.

‘ದೂರುಗಳು ಬರುತ್ತಲೇ ಇವೆ. ಸೋಮವಾರವೂ ಕೌಂಟರ್‌ಗಳು ಕಾರ್ಯನಿರ್ವಹಿಸಲಿದ್ದು, ದೂರುಗಳ ಸ್ವೀಕಾರ ಮುಂದುವರಿಯಲಿದೆ. ಕಂಪನಿಯಿಂದ ವಂಚನೆಯಾದ ಮೊತ್ತವೆಷ್ಟು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಕಂಪನಿ ಸಿಬ್ಬಂದಿಗೂ ₹2 ಕೋಟಿ ವಂಚನೆ
‘ಐಎಂಎ ಸಮೂಹ’ ಕಂಪನಿಯ ಕಚೇರಿ, ಆಸ್ಪತ್ರೆ, ಮಳಿಗೆ ಹಾಗೂ ಇತರೆಡೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೂ ವಂಚನೆಯಾಗಿರುವುದು ಗೊತ್ತಾಗಿದೆ.

‘ಕಂಪನಿ ಅಧೀನದಲ್ಲಿ ಕೆಲಸ ಮಾಡುತ್ತಿದ್ದ 200 ಮಂದಿ ₹ 2 ಕೋಟಿ ಹೂಡಿಕೆ ಮಾಡಿದ್ದರು. ದೂರು ನೀಡಲು ಕೌಂಟರ್‌ ಎದುರು ನಿಂತರೆ ಬೇರೆ ಹೂಡಿಕೆದಾರರು ತಮ್ಮ ಮೇಲೆ ಹಲ್ಲೆ ಮಾಡಬಹುದು ಎಂಬ ಭಯದಲ್ಲಿ ಸಿಬ್ಬಂದಿ ಇದ್ದರು. ಈಗ ಪ್ರತ್ಯೇಕವಾಗಿ ಠಾಣೆಗೆ ಬಂದು ಸಾಮೂಹಿಕವಾಗಿ ದೂರು ನೀಡಿದ್ದಾರೆ. ಅದರ ಪ್ರತಿಯನ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.