ADVERTISEMENT

ಐಎಂಎ ಜ್ಯುವೆಲ್ಸ್ ಮಳಿಗೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 18:36 IST
Last Updated 3 ನವೆಂಬರ್ 2019, 18:36 IST
   

ಬೆಂಗಳೂರು: ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಇತ್ತ ಸಂತ್ರಸ್ತರು ಐಎಂಎ ಜ್ಯುವೆಲ್ಸ್ ಮಳಿಗೆ ಎದುರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಲೇಡಿ ಕರ್ಜನ್ ರಸ್ತೆಯಲ್ಲಿರುವ ಮಳಿಗೆ ಎದುರು ಮಧ್ಯಾಹ್ನ 4ರ ಸುಮಾರಿಗೆ ಗುಂಪು ಸೇರಿದ್ದ ಪ್ರತಿಭಟನಾಕಾರರು, ಕಂಪನಿ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರು. ತಮ್ಮ ಹಣವನ್ನು ವಾಪಸು ಕೊಡಿಸುವಂತೆ ಒತ್ತಾಯಿಸಿದರು.

ಮಳಿಗೆಯ ಭದ್ರತೆಗೆ ನಿಯೋಜನೆಗೊಂಡಿರುವ ಕೆಎಸ್‌ಆರ್‌ಪಿ ಪೊಲೀಸರು, ಪ್ರತಿಭಟನಾಕಾರರನ್ನು ಸ್ಥಳದಿಂದ ಹೊರಟು ಹೋಗುವಂತೆ ಸೂಚನೆ ನೀಡಿದರು. ಆಗ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು.

ADVERTISEMENT

‘ಲಕ್ಷಾಂತರ ಮಂದಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರೆಲ್ಲರಿಗೂ ಅನ್ಯಾಯವಾಗಿದೆ. ತನಿಖೆ ಹೆಸರಿನಲ್ಲಿ ಕಾಲಹರಣ ಮಾಡಲಾಗುತ್ತಿದ್ದು, ಸಂತ್ರಸ್ತರಿಗೆ ಹಣ ವಾಪಸು ಕೊಡಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಶಿಕ್ಷಣ, ಮದುವೆ, ವ್ಯಾಪಾರಕ್ಕಾಗಿ ತೆಗೆದಿಟ್ಟ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದೇವೆ. ಆ ಹಣವನ್ನೆಲ್ಲ ಕಳೆದುಕೊಂಡು ಕಂಗಾಲಾಗಿದ್ದೇವೆ. ನಮ್ಮ ಹಣ ನಮಗೆ ಕೊಡಿಸಿ’ ಎಂದೂ ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಯೊಬ್ಬರು, ‘ಪ್ರಕರಣ ಬಹಿರಂಗವಾದಾಗಿನಿಂದ ಮುಂಜಾಗ್ರತಾ ಕ್ರಮವಾಗಿ ಕಂಪನಿಯ ಕಚೇರಿ ಹಾಗೂ ಮಳಿಗೆಗಳಿಗೆ ಭದ್ರತೆ ನೀಡಲಾಗಿದೆ. ಕೆಲವು ಸಂತ್ರಸ್ತರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅವರನ್ನು ಸಮಾಧಾನಪಡಿಸಿ ವಾಪಸು ಕಳುಹಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.