ADVERTISEMENT

ಐಎಂಎಗೆ ಕಡಿವಾಣ ಹಾಕದ ಆರ್‌ಒಸಿ?

ಹೊನಕೆರೆ ನಂಜುಂಡೇಗೌಡ
Published 28 ಜುಲೈ 2019, 20:01 IST
Last Updated 28 ಜುಲೈ 2019, 20:01 IST
   

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ ಅಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸ್‌, ಕಂದಾಯ, ಸಹಕಾರ ಇಲಾಖೆಗಳಂತೆಯೇ, ಕಾರ್ಪೊರೇಟ್‌ ಸಚಿವಾಲಯದ ಅಧೀನದಲ್ಲಿರುವ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ (ಆರ್‌ಒಸಿ) ಕೂಡಾ ವಿಫಲವಾಗಿದೆ.

ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಿಗಾ ವಿಭಾಗವು (ಡಿಎನ್‌ಬಿಎಸ್‌) ಮನ್ಸೂರ್‌ ಖಾನ್‌ ಒಡೆತನದ ಐಎಂಎ ಕಂಪನಿಯ ಅಕ್ರಮ ಕುರಿತು ಎರಡು ವರ್ಷಗಳಿಂದ ಅನೇಕ ಸಲ ಎಚ್ಚರಿಸಿತ್ತು. ರಾಜ್ಯದ ಅಂದಿನ ಮುಖ್ಯ ಕಾರ್ಯದರ್ಶಿ ಅವರೂ ಈ ಬಗ್ಗೆ ಪರಿಶೀಲಿಸಿ, ವಸ್ತುನಿಷ್ಠ ವರದಿ ನೀಡುವಂತೆ ಆರ್‌ಒಸಿಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ, 2017ರ ಮಾರ್ಚ್‌ 31ರಂದು ಈ ಕಂಪನಿ ಆಡಿಟರ್‌ರನ್ನು ಬೆಂಗಳೂರಿನ ಆರ್‌ಬಿಐ ಕಚೇರಿಗೆ ಕರೆಸಲಾಗಿತ್ತು. ಆರ್‌ಒಸಿ ಅವರೂ ಅಂದು ಹಾಜರಿದ್ದರು. ಕಂಪನಿ ವ್ಯವಹಾರ ಕುರಿತು ಮಾಹಿತಿ ಕೊಡುವಂತೆ ಆಡಿಟರ್‌ಗೆ ಕೇಳಲಾಗಿತ್ತು. ಎರಡೇ ವಾರದಲ್ಲಿ ಆಡಿಟರ್‌ ವಿವರವಾದ ಪತ್ರ ನೀಡಿದ್ದರು.

ADVERTISEMENT

‘ಐಎಂಎ, ಮಾಲೀಕತ್ವದ ಕಂಪನಿಯಾಗಿದ್ದು, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸ್ವಪ್ರೇರಣೆಯಿಂದ ₹ 50 ಸಾವಿರ ಮತ್ತು ಅದಕ್ಕಿಂತ ಮೇಲ್ಪಟ್ಟು ಮಾಡುವ ಹೂಡಿಕೆಯನ್ನು ಸ್ವೀಕರಿಸಿ, ಚಿನಿವಾರ ಪೇಟೆಯಲ್ಲಿ ಹಾಕುತ್ತದೆ. ಯಾವುದೇ ನಿರ್ಬಂಧವಿಲ್ಲದೆ ಅಥವಾ ಪೂರ್ವ ಷರತ್ತುಗಳಿಲ್ಲದೆ ತಮ್ಮ ಹಣ ಹಿಂಪಡೆಯಲು ಹೂಡಿಕೆದಾರರಿಗೆ ಅವಕಾಶವಿದೆ. ಆದರೆ, ಇದು ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದ್ದರು.

ಆದರೆ, ‘ಲೇವಾದೇವಿ ಅಥವಾ ಬಡ್ಡಿ ವ್ಯವಹಾರ ನಡೆಸದೆ ಇರುವುದರಿಂದ ಬ್ಯಾಂಕ್‌ ಅಥವಾ ಬ್ಯಾಂಕೇತರ ಕಾಯ್ದೆ ವ್ಯಾಪ್ತಿಗೆ ಈ ಕಂಪನಿ ಬರುವುದಿಲ್ಲ’ ಎಂದೂ ಆಡಿಟರ್‌ ಪ್ರತಿಪಾದಿಸಿದ್ದರು.

ಆನಂತರ, ‘ನಿರ್ದಿಷ್ಟ ಮಾರ್ಗಸೂಚಿಗಳನ್ವಯ ಕಂಪನಿ ನಡೆಯುತ್ತಿದೆಯೇ?’ ಎಂದೂ ಆರ್‌ಒಸಿಗೆ ಕೇಳಲಾಗಿತ್ತು. ಕಳೆದ ಏಪ್ರಿಲ್‌ ಅಂತ್ಯದಲ್ಲಿ ಇಂತಹದೇ ಸೂಚನೆ ನೀಡಲಾಗಿತ್ತು. ಆದರೆ, ಈ ಸೂಚನೆಗಳನ್ನು ಆರ್‌ಒಸಿ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಐಎಂಎ ವಂಚನೆ ಬಯಲಾದ ಬಳಿಕ ಅಂದರೆ, ಜೂನ್‌ 17ರಂದು ಸೇರಿದ್ದ ರಾಜ್ಯ ಮಟ್ಟದ ಸಮನ್ವಯ ಸಮಿತಿಯ (ಎಸ್‌ಎಲ್‌ಸಿಸಿ) ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ ಗರಂ ಆಗಿದ್ದರು. ಸರ್ಕಾರದ ಆದೇಶ ಕಡೆಗಣಿಸಿದ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆರ್‌ಒಸಿ, ಸಕಾಲಕ್ಕೆ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರೆ ಭಾರಿ ವಂಚನೆ ತಪ್ಪಿಸಲು ಸಾಧ್ಯವಿತ್ತು. ಆದರೆ, ಆರ್‌ಒಸಿ ಏಕೆ ತಟಸ್ಥರಾದರು ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಈ ಬಗ್ಗೆ ಆರ್‌ಒಸಿ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿತ್ತು. ಅವರು ಸಿಗಲಿಲ್ಲ.

‘ಸೆಬಿ ದ್ವಂದ್ವ ನಿಲುವು!’
‘ಸಾಮೂಹಿಕ ಹೂಡಿಕೆ ಯೋಜನೆಗೆ (ಸಿಐಎಸ್‌) ಜನರಿಂದ ಹಣ ಸಂಗ್ರಹಿಸಲು ಐಎಂಎ ಕಂಪನಿ ಅರ್ಹತೆ ಹೊಂದಿಲ್ಲ’ ಎಂದು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ಹಿಂದೆಯೇ ಹೇಳಿತ್ತು.

‘ಸೆಬಿ 1992ರ ಕಾಯ್ದೆ ಪ್ರಕಾರ, ಕಂಪನಿಗೆ ಹಣ ಸಂಗ್ರಹಿಸುವ ಅರ್ಹತೆ ಇಲ್ಲ. ಇದರ ಮಾಲೀಕರು ತಮ್ಮದೇ ಹೆಸರಿನಲ್ಲಿ ಅಲ್ಪ ಪ್ರಮಾಣದ ವಹಿವಾಟು ನಡೆಸಿದ್ದಾರೆ. ಹೂಡಿಕೆಯ ಹಣದಿಂದ ಕಂಪನಿಗೆ ಯಾವುದೇ ಸ್ವತ್ತೂ ಖರೀದಿಸಿಲ್ಲ’ ಎಂದೂ ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದರು.

ಅಚ್ಚರಿಯ ಸಂಗತಿ ಎಂದರೆ, ಬೆಂಗಳೂರು ಹೆಚ್ಚುವರಿ‍ಪೊಲೀಸ್‌ ಕಮಿಷನರ್‌ (ಅಪರಾಧ) 2017ರ ಮೇ 17ರಂದು ಬರೆದಿದ್ದ ಪತ್ರದಲ್ಲಿ, ‘ಐಎಂಎ, ಸಾರ್ವಜನಿಕರ ಹಣವನ್ನು ಹೂಡಿಕೆ ಚಟುವಟಿಕೆಗಳಲ್ಲಿ ತೊಡಗಿಸುತ್ತಿದೆ ಎನ್ನಲಾಗದು. ಅಲ್ಲದೆ, ಕಂಪನಿ ವಿರುದ್ಧ ಯಾವುದೇ ಪ್ರತಿಕೂಲ ವರದಿಗಳಿಲ್ಲ’ ಎಂದು ಸೆಬಿ ಡಿಜಿಎಂ ಹೇಳಿರುವುದಾಗಿ ವಿವರಿಸಿದ್ದರು. ಇದು ಸೆಬಿಯ ದ್ವಂದ್ವ ನಿಲುವಿಗೆ ಉದಾಹರಣೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.