ADVERTISEMENT

2013ರ ಮರಳು ನೀತಿ ಅನುಷ್ಠಾನಕ್ಕೆ ಭಂಡಾರಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:43 IST
Last Updated 6 ಅಕ್ಟೋಬರ್ 2023, 15:43 IST
ಮಂಜುನಾಥ ಭಂಡಾರಿ
ಮಂಜುನಾಥ ಭಂಡಾರಿ   

ಬೆಂಗಳೂರು: 2016ರಲ್ಲಿ ರೂಪಿಸಿದ್ದ ಖನಿಜ ನಿಯಮಗಳು, 2013ರ ಮರಳು ನೀತಿಯನ್ನೇ ಪುನರ್‌ ಅನುಷ್ಠಾನಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ರೂಪಿಸಿದ ಅವೈಜ್ಞಾನಿಕ ನಿಯಮಗಳ ಫಲವಾಗಿ ಮರಳಿನ ಸಮಸ್ಯೆ ತೀವ್ರವಾಗಿದೆ. ಮರಳು ತೆಗೆಯುವ ಸಾಂಪ್ರದಾಯಿಕ ಸಮುದಾಯಕ್ಕೆ ಪರವಾನಗಿ ನೀಡಬೇಕು. ಹೊಸದಾಗಿ ಅರ್ಜಿ ಕರೆದು ತಾತ್ಕಾಲಿಕ ಪರವಾನಗಿ ವಿತರಿಸಬೇಕು. ಗಣಿ ಮಂಜೂರಾತಿಗೆ ಪರಿಸರ ನಿರಾಕ್ಷೇಪಣಾ ಪತ್ರ ನೀಡಲು ಜಿಲ್ಲಾಮಟ್ಟದಲ್ಲೇ ಸಮಿತಿ ರಚಿಸಬೇಕು. ಆಯಾ ಜಿಲ್ಲೆಗಳ ಹಂತದಲ್ಲೇ ಅನುಮತಿ ನೀಡಬೇಕು. ಕರಾವಳಿ ಜಿಲ್ಲೆಗಳ ನದಿಪಾತ್ರದಲ್ಲಿ ಸಿಆರ್‌ಜೆಡ್‌ ನಿಯಮದಂತೆ ಮರಳು ತೆಗೆಯಲು ಅವಕಾಶ ಕಲ್ಪಿಸಬೇಕು ಎಂದರು.

ಮರಳು, ಕೆಂಪುಕಲ್ಲು, ಕೆಂಪುಮಣ್ಣು, ಕಟ್ಟಡಕಲ್ಲು ಹಾಗೂ ಜೆಲ್ಲಿಕಲ್ಲಿಗೆ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಏಕರೂಪದ ದರ ನಿಗದಿ ಮಾಡಬೇಕು. ಅವುಗಳ ಗಣಿಗಾರಿಕೆಗೆ ಇರುವ ತೊಡಕುಗಳನ್ನು ನಿವಾರಿಸಲು 2023ರ ನಿಯಮಗಳನ್ನು ರದ್ದು ಮಾಡಿ, 2016ರ ತಿದ್ದುಪಡಿ ನಿಯಮಗಳನ್ನೇ ಜಾರಿಗೊಳಿಸುವ ಅಗತ್ಯದ ಕುರಿತು ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಕರಾವಳಿಯ ಭಾಗದ ನೈಸರ್ಗಿಕ ಉತ್ಪನ್ನಗಳಾದ ಕೆಂಪುಕಲ್ಲು, ಕೆಂಪುಮಣ್ಣು ಹಾಗೂ ಮರಳನ್ನು ಇತರೆ ಜಿಲ್ಲೆಗಳಿಗೆ ಸಾಗಣೆ ಮಾಡಲು ನಿರ್ಬಂಧ ಹಾಕಬೇಕು. ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಕಲ್ಲಿನ ಗುತ್ತಿಗೆ ಪಡೆಯಲು ಇರುವ ಎರಡು ಎಕರೆ ಮಿತಿಯನ್ನು ಸಡಿಲಿಸಿ, ಅರ್ಧ ಎಕರೆಗೆ ನಿಗದಿ ಮಾಡಬೇಕು. ಜಲ್ಲಿಕಲ್ಲು, ಎಂ-ಸ್ಯಾಂಡ್‌ ಘಟಕಗಳಿಗೆ ತುರ್ತು ಪರವಾನಗಿ ನೀಡಲು ಕ್ರಮಕೈಗೊಳ್ಳಲು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.