ADVERTISEMENT

ಗಣಿಗಾರಿಕೆ: ಶೀಘ್ರ ನಿಯಮ ಸರಳೀಕರಣ

ಎಂ–ಸ್ಯಾಂಡ್‌ ಉತ್ಪಾದನೆ ಹೆಚ್ಚಿಸಲು ಗಣಿಗಾರಿಕೆ ನೀತಿಯಲ್ಲಿ ಮಾರ್ಪಾಡು: ಸಚಿವರ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 20:55 IST
Last Updated 30 ಸೆಪ್ಟೆಂಬರ್ 2022, 20:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮರಳಿನ ಕೊರತೆ ಶಾಶ್ವತವಾಗಿ ನೀಗಿಸಲು ಮುಂದಾಗಿರುವ ಸರ್ಕಾರ, ಗಣಿಗಾರಿಕೆಯ ನಿಯಮ
ಗಳನ್ನು ಸರಳೀಕರಣಗೊಳಿಸುತ್ತಿದೆ.

ರಾಜ್ಯದಲ್ಲಿ ವಾರ್ಷಿಕ 4.50 ಕೋಟಿ ಟನ್‌ ಮರಳಿಗೆ ಬೇಡಿಕೆ ಇದೆ. ಆದರೆ, 50 ಲಕ್ಷ ಟನ್‌ ನೈಸರ್ಗಿಕ ಮರಳು ದೊರೆಯುತ್ತಿದೆ. 3.50 ಕೋಟಿ ಟನ್‌ ಎಂ–ಸ್ಯಾಂಡ್‌ ಮೂಲಕ ಕೊರತೆ ನೀಗಿಸಲಾಗುತ್ತಿದೆ.

ಹೆಚ್ಚುವರಿ ಕೊರತೆ ನೀಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಎಂ–ಸ್ಯಾಂಡ್‌ ಉತ್ಪಾದನೆ ಹೆಚ್ಚಿಸಲು ಗಣಿಗಾರಿಕೆ ನೀತಿ ಮಾರ್ಪಾಡು ಮಾಡಲಾಗುತ್ತಿದೆ. ಶೀಘ್ರ ಸಂಪುಟದ ಅನುಮೋದನೆ ಪಡೆದು, ಜಾರಿಗೊಳಿಸಲಾಗುವುದು ಎಂದು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ADVERTISEMENT

ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳುವುದು ವೆಚ್ಚದಾಯಕ. ಹಿಂದಿನ ಸರ್ಕಾರ ಅದಕ್ಕಾಗಿ ಸಾಕಷ್ಟು ಹಣ ವೆಚ್ಚ ಮಾಡಿದೆ. ಈ ರೀತಿಯ ಆರ್ಥಿಕ ನಷ್ಟಕ್ಕೆ ಅವಕಾಶ ನೀಡಬಾರದು ಎಂದೇ ಹೊಸ ನೀತಿ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.

ಖನಿಜ ನಿಗಮಕ್ಕೆ ಹೊಣೆ:ಹಟ್ಟಿ ಚಿನ್ನದ ಗಣಿ, ಕರ್ನಾಟಕ ರಾಜ್ಯ ಖನಿಜ ನಿಗಮಗಳಿಗೆ ಮರಳು ನಿರ್ವಹಣೆಯ ಹೊಣೆ ನೀಡಲಾಗಿದೆ. ₹ 800 ಕ್ಕೆ ಒಂದು ಟನ್‌ ಮರಳು ವಿತರಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿದವರು ಸಂಗ್ರಹಾಗಾರಗಳಿಂದ ಮರಳು ತರಬಹುದು.

ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ನದಿಗಳ ಹರಿವಿನ ಜಾಗದಲ್ಲಿ ಮರಳು ತೆಗೆಯುವಂತಿಲ್ಲ. ಪರಿಸರ ಸೂಕ್ಷ್ಮ ಪ್ರದೇಶ, ಕರಾವಳಿ ನಿಯಂತ್ರಣ ವಲಯ ಮತ್ತಿತರ ನಿರ್ಬಂಧಗಳನ್ನು ಹೊರತುಪಡಿಸಿ, ಉಳಿದ ಭಾಗಗಳಲ್ಲಿ ಮರಳು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಸ್ತೆ ಬದಿಯಿಂದ 250 ಮೀಟರ್‌ ನಿರ್ಬಂಧ ಕಡಿಮೆ ಮಾಡಲಾಗಿದೆ. ತ್ವರಿತ ನಿರ್ಧಾರ ಕೈಗೊಳ್ಳುವ ಹೊಣೆ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಹೊಸ ನೀತಿಯ ನಂತರ ಮರಳಿನ ಕೊರತೆ ಶಾಶ್ವತವಾಗಿ ನಿವಾರಣೆಯಾಗಲಿದೆ ಎಂದು ವಿವರ ನೀಡಿದರು.

ಗಣಿಗಾರಿಕಾ ಚಟುವಟಿಕೆಗಳಿಂದ ಒಂದು ವರ್ಷದಲ್ಲಿ ₹ 4,357 ಕೋಟಿ ರಾಜಧನ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಗುರಿ ಮೀರಿ ₹6,308 ಕೋಟಿ ಸಂಗ್ರಹಿಸಲಾಗಿದೆ. ಶೇ 140 ರಷ್ಟು ಸಾಧನೆಯಾಗಿದೆ ಎಂದರು.

ಬೆಂಗಳೂರು: ‘ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾನೂನನ್ನು ಸರಳೀಕರಿಸಿ, ಸಮಸ್ಯೆಗಳ ನಿವಾರಣೆಗೆ ಕ್ರಮವಹಿಸಬೇಕು’ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಆಗ್ರಹಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ, ‘ಬೃಹತ್ ಗಣಿಗಾರಿಕೆ ಪ್ರದೇಶ ಮತ್ತು ಸಣ್ಣ ಗಣಿಗಾರಿಕೆ ಪ್ರದೇಶಗಳ
ನಿಯಮಗಳು ಒಂದೇ ಪರಿಮಿತಿಯಲ್ಲಿ ಬಂದಿರುವುದರಿಂದ ಈ ನಿಯಮಗಳ ಅನುಷ್ಠಾನದಲ್ಲಿ ತೊಂದರೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೂ ಅನಾನುಕೂಲ
ವಾಗುತ್ತಿದೆ. ಈ ಹಿಂದೆ ನಮಗೆ ವಿಧಿಸಿರುವ ಐದು ಪಟ್ಟು ದಂಡವನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

‘ರಾಜಧನ ಸಂಗ್ರಹಕ್ಕೆ ಸಮರ್ಪಕ ನಿಯಮ ರೂಪಿಸಬೇಕು. ರಾಜಧನ ಸಂಗ್ರಹಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ದರದಲ್ಲಿ ವ್ಯತ್ಯಾಸವಿದೆ. ಏಕರೂಪ ಕಾಯ್ದೆ ಮೂಲಕ ಒಂದೇ ಕಡೆ ರಾಜಧನ ಸಂಗ್ರಹವಾಗಬೇಕು. ಕಟ್ಟಡ ಕಲ್ಲಿನ ಪರವಾನಗಿಯನ್ನು 20 ವರ್ಷಗಳ ಬದಲು, 50 ವರ್ಷಗಳಿಗೆ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.