ADVERTISEMENT

ಏಕಸಂಸ್ಕೃತಿ ಹೇರಿಕೆಯೇ ತುರ್ತುಪರಿಸ್ಥಿತಿ: ಪತ್ರಕರ್ತ ಪ್ರಬೀರ್ ಪುರಕಾಯಸ್ತ

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಬೀರ್‌ ಪುರಕಾಯಸ್ತ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 0:38 IST
Last Updated 22 ಜೂನ್ 2025, 0:38 IST
ಪ್ರಬೀರ್ ಪುರಕಾಯಸ್ತ
ಪ್ರಬೀರ್ ಪುರಕಾಯಸ್ತ   

ಬೆಂಗಳೂರು: ‘ಅಪಾರ ಭಾಷಿಕ ಮತ್ತು ಸಾಂಸ್ಕೃತಿಕ ವೈವಿಧ್ಯ ಇರುವ ಭಾರತ
ಉಪಖಂಡವನ್ನು ಈಗಿನ ಫ್ರಭುತ್ವವು ಏಕಭಾಷಿಕ ಸಂಸ್ಕೃತಿಯಾಗಿಸಲು ಯತ್ನಿಸುತ್ತಿದೆ. ಇದು ಈಗಿನ ಸಂಘರ್ಷ ಮತ್ತು ತಳಮಳಕ್ಕೆ ಕಾರಣ. ಇದೇ ಈ ಹೊತ್ತಿನ ತುರ್ತುಪರಿಸ್ಥಿತಿ’ ಎಂದು ಹಿರಿಯ ಪತ್ರಕರ್ತ ಪ್ರಬೀರ್ ‍ಪುರಕಾಯಸ್ತ ಪ್ರತಿಪಾದಿಸಿದರು.

ಅಭಿರುಚಿ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪ್ರಬೀರ್‌ ಅವರು ತಮ್ಮ ‘ಕೀಪಿಂಗ್‌ ಅಪ್‌ ದಿ ಗುಡ್‌ ಫೈಟ್‌’ನ ಕನ್ನಡಾನುವಾದ ‘ಆರದ ಹೋರಾಟದ ಕಿಚ್ಚು’ ಪುಸ್ತಕದ ಬಿಡುಗಡೆಯ ನಂತರ ಮಾತನಾಡಿದರು.

‘ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ್ದಾಗ, ಅದು ಎಲ್ಲರ ಅನುಭವಕ್ಕೂ ಬಂದಿತ್ತು. ಅದರ ವಿರುದ್ಧ ಸಾಮಾನ್ಯ ಜನರು ಮಾತನಾಡದೇ ಇದ್ದರೂ, ಚುನಾವಣೆಯಲ್ಲಿ ಇಂದಿರಾ ಅವರನ್ನು ಸೋಲಿಸಿದರು. ಆದರೆ ಈಗ ಅಂತಹ ಸ್ಥಿತಿ ಇಲ್ಲ’ ಎಂದರು.

ADVERTISEMENT

‘ಇಂದಿನ ಪ್ರಭುತ್ವವು ಭಾರತವನ್ನು ಏಕಸಂಸ್ಕೃತಿಯಾಗಿಸಲು ಹೊರಟಿದೆ. ಇದಕ್ಕಾಗಿ ಬಂಡವಾಳಶಾಹಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ಪ್ರಶ್ನಿಸಬೇಕಿದ್ದ ಬೃಹತ್ ಮಾಧ್ಯಮ ಸಂಸ್ಥೆಗಳು ಒಂದಲ್ಲಾ ಒಂದು ರೀತಿಯಲ್ಲಿ ಪ್ರಭುತ್ವದ ಹಿಡಿತದಲ್ಲಿವೆ. ಪ್ರಭುತ್ವದ ಉದ್ದೇಶದ ಕಾರಣಕ್ಕೇ ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಮಾತ್ರ ಗುರಿ ಮಾಡಲಾಗುತ್ತಿದೆ’ ಎಂದರು.

ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು, ‘ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ ಆರಂಭದ ದಿನಗಳಲ್ಲಿ ಆರ್‌ಎಸ್‌ಎಸ್‌ ಸರಸಂಘಚಾಲಕರು ವಿರೋಧಿಸಿದ್ದರು. ನಂತರದ ದಿನಗಳಲ್ಲಿ ಕ್ಷಮಾಪಣೆ ಪತ್ರ ಬರೆದು, ಅವರಿಗೆ ಬೆಂಬಲ ಸೂಚಿಸಿದ್ದರು. ಅಡ್ವಾಣಿ ಸಹ ಕ್ಷಮಾಪಣೆ ಪತ್ರ ಬರೆದಿದ್ದರು. ಅಂದು, ಆ ರೀತಿಯಲ್ಲಿ ತುರ್ತುಪರಿಸ್ಥಿತಿ ಯನ್ನು ಬೆಂಬಲಿಸಿದ್ದವರೇ ಇಂದು ಅಘೋಷಿತ ತುರ್ತುಪರಿಸ್ಥಿತಿಯನ್ನು
ಬೆಂಬಲಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಅನ್ಯಾಯದ ವಿರುದ್ಧ ಬೀದಿಯಲ್ಲಿ ನಿಂತು ಶಾಂತವಾಗಿ ಪ್ರತಿಭಟನೆ ನಡೆಸುವಂತಹ ಸ್ಥಿತಿ ಕರ್ನಾಟಕದಲ್ಲೂ ಇಲ್ಲ ಎಂಬುದು ಚೋದ್ಯ

ಕೆ.ಎಸ್‌.ವಿಮಲಾ ಹೋರಾಟಗಾರ್ತಿ

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿಗೆ ಕೋಮುವಾದದ ಸೋಂಕು ಇರಲಿಲ್ಲ. ಈಗಿನ ಅಘೋಷಿತ ತುರ್ತುಪರಿಸ್ಥಿತಿಗೆ ಕೋಮುವಾದದ ಸೋಂಕು ಇದೆ

ಎ.ನಾರಾಯಣ ಲೇಖಕ

‘ಇತಿಹಾಸ ಮರೆತಿದ್ದೇ ದುರಂತ’

‘ಎಲ್ಲವನ್ನೂ ಮರೆತುಬಿಡುವುದು ನಮಗೆ ಒಗ್ಗಿಹೋಗಿದೆ. ಈ ಕಾರಣದಿಂದಲೇ ಹಿಂದಿನ ತುರ್ತುಪರಿಸ್ಥಿತಿ ಅದರ ಅನುಭವಗಳು ಮತ್ತು ಅದರ ವಿರುದ್ಧದ ಹೋರಾಡಿದ ನೆನಪುಗಳು ಮರೆಯಾಗಿ ಹೋಗಿವೆ. ಪರಿಣಾಮವಾಗಿ ಇನ್ನೊಂದು ತುರ್ತುಪರಿಸ್ಥಿತಿಯನ್ನು ಎದುರಿಸಲು ಆಗದೇ ಇರುವಂತಹ ಸ್ಥಿತಿಗೆ ಬಂದು ನಿಂತಿದ್ದೇವೆ’ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದರು. ‘ಈಗಿನ ತುರ್ತು‍ಪರಿಸ್ಥಿತಿಯನ್ನು ಎದುರಿಸಲು ಏನು ಮಾಡಬೇಕು ಎಂದು ಗೊತ್ತಾಗದ ಸನ್ನಿವೇಶ ಈಗ ಇದೆ. ಎಂತಹ ಮುಠ್ಠಾಳ ಸರ್ವಾಧಿಕಾರಿ ಸಹ ಭಾರತದಂತಹ ವೈವಿಧ್ಯದ ದೇಶವನ್ನು ಏಕಸಂಸ್ಕೃತಿಯಾಗಿಸುವ ಯತ್ನ ಮಾಡುವುದಿಲ್ಲ. ಬಹುತ್ವವನ್ನು ಉಳಿಸಿಕೊಂಡು ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗುವ ಮನಸ್ಥಿತಿಯಿಂದ ಮಾತ್ರವೇ ಹೋರಾಟ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.