ADVERTISEMENT

BJP ಶಾಸಕ ಬೆಲ್ದಾಳೆ ಜೊತೆ ಅನುಚಿತ ವರ್ತನೆ: RTO ಇನ್‌ಸ್ಪೆಕ್ಟರ್‌ ಕೊರವಿ ಅಮಾನತು

ಸಾರಿಗೆ ಇಲಾಖೆಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಮಂಜುನಾಥ ಕೊರವಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 9:14 IST
Last Updated 6 ಡಿಸೆಂಬರ್ 2024, 9:14 IST
<div class="paragraphs"><p>ಘಟನೆ ನಡೆದ ಸಂದರ್ಭ</p></div>

ಘಟನೆ ನಡೆದ ಸಂದರ್ಭ

   

ಬೀದರ್‌: ಬೀದರ್‌ ದಕ್ಷಿಣ ಕ್ಷೇತ್ರದ ಬಿಜೆಪಿ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ಸಾರಿಗೆ ಇಲಾಖೆಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಮಂಜುನಾಥ ಕೊರವಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಬೆಲ್ದಾಳೆ ಅವರೊಂದಿಗಿನ ಸಂಭಾಷಣೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಮಂಜುನಾಥ ಕೊರವಿ ಅವರನ್ನು ಸಾರಿಗೆ ಇಲಾಖೆಯ ಕಾಗದ ಪತ್ರಗಳ ವಿಭಾಗಕ್ಕೆ ವರ್ಗ ಮಾಡಲಾಗಿತ್ತು. ಬೆಲ್ದಾಳೆ ಅವರು ಕೊರವಿ ವಿರುದ್ಧ ಸರ್ಕಾರಕ್ಕೆ ಹಕ್ಕುಚ್ಯುತಿ ಕುರಿತು ದೂರು ಸಲ್ಲಿಸಿದ ಕಾರಣ ಅಮಾನತುಗೊಳಿಸಲಾಗಿದೆ. ಅಮಾನತು ಅವಧಿ ಕೊನೆಗೊಂಡ ನಂತರ ಜಾರಿಗೆ ಬರುವಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ವರ್ಗಾಯಿಸಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ADVERTISEMENT

ಘಟನೆ ಏನು?

ಕಳೆದ ಅಕ್ಟೋಬರ್‌ 29ರ ರಾತ್ರಿ 10ಗಂಟೆ ಸುಮಾರಿಗೆ ಬೆಲ್ದಾಳೆ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾಲ್ಕಿ ರಸ್ತೆ ಮೂಲಕ ತೆರಳುತ್ತಿದ್ದರು. ನೌಬಾದ್‌–ಲಾಲ್‌ಬಾಗ್‌ ಸಮೀಪ ರಸ್ತೆಯ ಎರಡೂ ಬದಿ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಜನ ಕೂಡ ನಿಂತಿದ್ದರು. ಇದನ್ನು ಗಮನಿಸಿದ ಬೆಲ್ದಾಳೆ ಅವರು ಮಂಜುನಾಥ ಕೊರವಿ ಬಳಿ ತೆರಳಿ, ‘ರಾತ್ರಿ ಹೊತ್ತು ಇಷ್ಟೊಂದು ವಾಹನಗಳನ್ನೇಕೆ ತಡೆದು ನಿಲ್ಲಿಸಿದ್ದೀರಿ. ಮಹಿಳೆಯರು, ಮಕ್ಕಳು ರಸ್ತೆಬದಿ ನಿಂತಿದ್ದಾರೆ. ಬೇಗ ಪರಿಶೀಲಿಸಿ ಕಳಿಸಿಕೊಡಬೇಕು. ಹೆಲ್ಮೆಟ್‌ ಇದ್ದರೂ ಬೈಕ್‌ ಸವಾರರನ್ನೇಕೆ ತಡೆದಿದ್ದೀರಿ? ಜನರಿಗೆ ತೊಂದರೆ ಕೊಡಬೇಡಿ’ ಎಂದು ಹೇಳಿದ್ದಾರೆ.

ಇದರಿಂದ ಕೆರಳಿದ ಮಂಜುನಾಥ, ನಿಮ್ಮಂಥ ಲೀಡರ್‌ಗಳನ್ನು ಎಲ್ಲೆಡೆ ನೋಡಿದ್ದೇನೆ. ನೀವು ಮಂತ್ರಿ, ಎಂಎಲ್‌ಎ ಇರಬಹುದು. ನೀವು ಎಂಎಲ್‌ಎ ಅಂತ ನನಗೆ ಗೊತ್ತಿಲ್ಲ. ನಿಮ್ಮನ್ನು ಫಸ್ಟ್‌ ಟೈಮ್‌ ನೋಡ್ತಾ ಇದ್ದೀನಿ ಎಂದು ಶಾಸಕರು ಹಾಗೂ ಅವರ ಬೆಂಬಲಿಗರತ್ತ ಕೈಎತ್ತಿ ಚುಟುಕಿ ಹೊಡೆದು ಸವಾಲು ಹಾಕುವ ರೀತಿಯಲ್ಲಿ ಮಾತನಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.