ಬೆಂಗಳೂರು: ಕಾರ್ಮಿಕರಿಗೆ ವಂಚಿಸುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಲೇ ಇದ್ದು, ‘ಇಂಡಿಯಾ ಲೇಬರ್ ಲೈನ್’ ಉಚಿತ ಸಹಾಯವಾಣಿಯಡಿ ನಾಲ್ಕು ವರ್ಷಗಳಲ್ಲಿ 7,160 ದೂರುಗಳು ದಾಖಲಾಗಿವೆ.
ಇದು ಕಾರ್ಮಿಕರಿಗಾಗಿಯೇ ರೂಪಿಸಿರುವ ಸಹಾಯವಾಣಿಯಾಗಿದೆ. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವರ್ಕಿಂಗ್ ಪೀಪಲ್ಸ್ ಚಾರ್ಟರ್ (ಡಬ್ಲ್ಯುಪಿಸಿ) ಮತ್ತು ಆಜೀವಿಕ ಬ್ಯೂರೊ ಸಂಸ್ಥೆ ಜಂಟಿಯಾಗಿ ಈ ಸಹಾಯವಾಣಿಯನ್ನು 2021ರ ಜುಲೈನಲ್ಲಿ ಪ್ರಾರಂಭಿಸಿವೆ. ವೇತನ ತಾರತಮ್ಯ, ವಂಚನೆ, ಕೆಲಸದ ಸ್ಥಳದಲ್ಲಿ ಹಿಂಸೆ ಸೇರಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಸಹಾಯವಾಣಿಯಡಿ ಕಾರ್ಮಿಕರಿಗೆ ನೆರವು ಒದಗಿಸಲಾಗುತ್ತಿದೆ.
ಇಂಡಿಯಾ ಲೇಬರ್ ಲೈನ್ ತಂಡವು ವಕೀಲರು ಸೇರಿ ಕ್ಷೇತ್ರ ತಜ್ಞರನ್ನು ಒಳಗೊಂಡಿದ್ದು, ಸಲ್ಲಿಕೆಯಾಗಿರುವ ದೂರುಗಳಲ್ಲಿ ಶೇ 47 ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಶೇ 5 ರಷ್ಟು ಪ್ರಕರಣಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುತ್ತಿದೆ.
ಮಾಲೀಕರು, ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳಿಂದ ವಲಸೆ ಮತ್ತು ಅಸಂಘಟಿತ ಕಾರ್ಮಿಕರು ಎದುರಿಸುವ ಸಮಸ್ಯೆಗಳಿಗೆ ಕಾನೂನು ನೆರವನ್ನೂ ಇಂಡಿಯಾ ಲೇಬರ್ ಲೈನ್ ತಂಡ ಒದಗಿಸುತ್ತಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಕೇಂದ್ರ ಹೊಂದಿದ್ದು, ಸುತ್ತಮುತ್ತಲಿನ ಜಿಲ್ಲೆಗಳಿಂದ ಬರುವ ದೂರುಗಳಿಗೆ ಅಲ್ಲಿಂದಲೇ ಸ್ಪಂದಿಸುತ್ತಿದೆ.
3,371 ಪ್ರಕರಣ ಇತ್ಯರ್ಥ: ಭವಿಷ್ಯ ನಿಧಿ (ಪಿಎಫ್) ಮತ್ತು ಗ್ರಾಚ್ಯುಟಿ (ಉಪಧನ) ಸಮಸ್ಯೆ, ಅಧಿಕ ಅವಧಿ ದುಡಿಮೆ, ಅಪಘಾತ ಪರಿಹಾರ ನಿರಾಕರಣೆ ಹಾಗೂ ವೇತನ ವಿಳಂಬದ ಬಗ್ಗೆಯೂ ಕಾರ್ಮಿಕರು ಹೆಚ್ಚಾಗಿ ಸಹಾಯವಾಣಿ ಸಂಪರ್ಕಿಸಿದ್ದಾರೆ. ದಾಖಲಾಗಿರುವ ದೂರುಗಳಲ್ಲಿ 3,371 ಪ್ರಕರಣಗಳನ್ನು ಇಂಡಿಯಾ ಲೇಬರ್ ಲೈನ್ ತಂಡವು ಬಗೆಹರಿಸಿದೆ. ಬಾಧಿತರಾಗಿದ್ದ 7,399 ಕಾರ್ಮಿಕ ಕುಟುಂಬಗಳಿಗೆ ₹ 6.43 ಕೋಟಿ ಕೈಸೇರುವಂತೆ ಮಾಡಿದೆ. ಬೆಂಗಳೂರಿನಲ್ಲಿಯೇ ಅಧಿಕ ದೂರುಗಳು ವರದಿಯಾಗುತ್ತಿದ್ದು, ನಾಲ್ಕು ವರ್ಷಗಳಲ್ಲಿ 4 ಸಾವಿರಕ್ಕೂ ಅಧಿಕ ದೂರುಗಳನ್ನು ಕಾರ್ಮಿಕರು ನೀಡಿದ್ದಾರೆ. ಇವುಗಳಲ್ಲಿ 2 ಸಾವಿರಕ್ಕೂ ಅಧಿಕ ದೂರುಗಳನ್ನು ಇತ್ಯರ್ಥ ಮಾಡುವ ಮೂಲಕ 5 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೆರವು ಒದಗಿಸಲಾಗಿದೆ.
‘ಸಹಾಯವಾಣಿಗೆ ಕರೆ ಮಾಡಿದ ಕಾರ್ಮಿಕರಿಗೆ ಕಾನೂನು ಸಲಹೆಯೂ ಸೇರಿ ಎಲ್ಲ ರೀತಿಯ ನೆರವನ್ನು ಒದಗಿಸಲಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಮಾಲೀಕರು ಹಾಗೂ ಗುತ್ತಿಗೆದಾರರ ಭಯದ ಕಾರಣ ಕಾರ್ಮಿಕರು ದೂರನ್ನು ವಾಪಸ್ ಪಡೆಯುತ್ತಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ಪರಸ್ಪರ ಒಪ್ಪಂದ ಮಾಡಿಕೊಂಡು ಇತ್ಯರ್ಥ ಮಾಡಿಕೊಂಡಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಕಾನೂನಿನ ಪ್ರಕಾರ ಇತ್ಯರ್ಥ ಮಾಡಲಾಗಿದೆ. ಎಲ್ಲ ಸೇವೆಯೂ ಉಚಿತವಾಗಿದ್ದು, ಕಾರ್ಮಿಕರಿಗೆ ನ್ಯಾಯ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದು ಸಹಾಯವಾಣಿಯ ಸಹಾಯಕ ರಾಜ್ಯ ಸಂಯೋಜಕಿ ಗಾಯತ್ರಿ ರಘು ಕುಮಾರ್ ತಿಳಿಸಿದರು.
‘ಅಸಂಘಂಟಿತ ವಲಯಗಳಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರ ಮನೆ ಕೆಲಸ ಸ್ವಚ್ಛತೆ ಗಾರ್ಮೆಂಟ್ಸ್ ಸಣ್ಣ ಕೈಗಾರಿಕೆಗಳು ಕಾರ್ಖಾನೆಗಳು ಭದ್ರತೆ ಸೇವಾ ವಲಯಗಳಾದ ನರ್ಸಿಂಗ್ ಹೋಮ್ ನರ್ಸಿಂಗ್ ಹಾಗೂ ಇನ್ನಿತರೆ ಅಸಂಘಟಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಸುತ್ತಿರುವವರು ಈ ಸಹಾಯವಾಣಿಗೆ ಕರೆ ಮಾಡಬಹುದು. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಸಹಾಯವಾಣಿ ಸಕ್ರಿಯವಾಗಿ ಇರಲಿದೆ. ಬೇರೆ ಅವಧಿಯಲ್ಲಿ ಕರೆ ಮಾಡಿದರೂ ಕಾರ್ಯಾವಧಿಯಲ್ಲಿ ಸಂಪರ್ಕಿಸಲಾಗುತ್ತದೆ’ ಎಂದು ಸಹಾಯವಾಣಿಯ ರಾಜ್ಯ ಸಂಯೋಜಕ ಮುನಿರಾಜು ಟಿ. ಮಾಹಿತಿ ನೀಡಿದರು. ಉಚಿತ ಸಹಾಯವಾಣಿ ಸಂಖ್ಯೆ: 18008339020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.