ADVERTISEMENT

ತಂಬಾಕು ಉತ್ಪನ್ನ ಬಳಕೆ ಹೆಚ್ಚಳ: ರಾಜ್ಯ ತಂಬಾಕು ನಿಯಂತ್ರಣ ಘಟಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:30 IST
Last Updated 25 ಫೆಬ್ರುವರಿ 2023, 22:30 IST
   

ಬೆಂಗಳೂರು: ‘ತಂಬಾಕು ಉತ್ಪನ್ನಗಳ ಬಳಕೆಯು ಕ್ಯಾನ್ಸರ್ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಶೇ 22.8ರಷ್ಟು ವಯಸ್ಕರು ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕ ಕಳವಳ ವ್ಯಕ್ತಪಡಿಸಿದೆ. ‌

ತಂಬಾಕು ಉತ್ಪನ್ನಗಳ ಬಳಕೆಯ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಘಟಕವು ಇದೇ 28ರಂದು ಆರೋಗ್ಯಸೌಧದಲ್ಲಿ ಕಾರ್ಯಾಗಾರ ಹಮ್ಮಿಕೊಂಡಿದೆ. ತಜ್ಞರು ತಂಬಾಕು ಬಳಕೆಯಿಂದಾಗುವ ಅನಾರೋಗ್ಯ ಸಮಸ್ಯೆಗಳು ಹಾಗೂ ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.

‘ರಾಜ್ಯದ 7 ಕೋಟಿ ಜನರಲ್ಲಿ 3 ಕೋಟಿ ಮಂದಿ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಈ ಉತ್ಪನ್ನಗಳನ್ನು ಬಳಸುತ್ತಿರುವ ಶೇ 22.8ರಷ್ಟು ವಯಸ್ಕರಲ್ಲಿ ಶೇ 8.8ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಶೇ 16.3ರಷ್ಟು ಮಂದಿ ಧೂಮಪಾನರಹಿತ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ’ ಎಂದು ಘಟಕ ಹೇಳಿದೆ.

ADVERTISEMENT

‘ತಂಬಾಕು ಉತ್ಪನ್ನ ಬಳಸುವ ಯುವಜನರಲ್ಲಿ ಹೆಚ್ಚಿನವರು 15 ವರ್ಷದವರಾಗಿದ್ದಾರೆ. ತಂಬಾಕಿನ ಅಪಾಯದ ಬಗ್ಗೆ ಅರಿವಿದ್ದರೂ, ಯುವಜನರಲ್ಲಿ ತಂಬಾಕಿನ ಬಗೆಗೆ ಅಲಕ್ಷ್ಯ ಪ್ರವೃತ್ತಿ ಹೆಚ್ಚಾಗಿದೆ’ ಎಂದು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.