ADVERTISEMENT

ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿ: ಪ್ರಧಾನಿಗೆ ದೇವೇಗೌಡ ಪತ್ರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 18:46 IST
Last Updated 24 ಫೆಬ್ರುವರಿ 2022, 18:46 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ    

ಬೆಂಗಳೂರು: ‘ಮೆಕ್ಕೆಜೋಳ ಮತ್ತು ರಾಗಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ರಮವಾಗಿ ಪ್ರತಿ ಕ್ವಿಂಟಲ್‌ಗೆ ₹ 2,500 ಮತ್ತು ₹ 4 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯಸಭೆ ಜೆಡಿಎಸ್‌ ಸದಸ್ಯ ಎಚ್.ಡಿ.ದೇವೇಗೌಡ ಪತ್ರ ಬರೆದಿದ್ದಾರೆ.

‘ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,870 ನಿಗದಿಗೊಳಿಸಿದ್ದು, ಈ ವರ್ಷ ₹ 20 ಹೆಚ್ಚಿಸಲಾಗಿದೆ. ಅಂತೆಯೇ ರಾಗಿಗೆ ಪ್ರತಿ ಕ್ವಿಂಟಲ್‌ಗೆ ₹ 3,377 ನಿಗದಿಗೊಳಿಸಿದ್ದು, ₹ 52 ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಯಾವುದೇ ರೀತಿಯಲ್ಲಿಯೂ ಪ್ರಯೋಜನ ಆಗಿಲ್ಲ’ ಎಂದಿದ್ದಾರೆ.

‘ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಮತ್ತು ರಾಗಿ ಖರೀದಿ ವಿಳಂಬ ಮಾಡುತ್ತಿರುವ ಕಾರಣ ರೈತರು ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಗಿಂತ ಶೇ 35ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮತ್ತಷ್ಟು ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ಅಲ್ಲದೆ, ಖರೀದಿ ಪ್ರಮಾಣಕ್ಕೆ ಸರ್ಕಾರ ಮಿತಿ ಹೇರಬಾರದು. ಅಲ್ಲದೆ, ಗೊಬ್ಬರ, ಬಿತ್ತನೆ ಬೀಜ ದರ ಹೆಚ್ಚಳವಾಗಿದ್ದು, ಈ ಬಗ್ಗೆ ಪರಿಣಿತರಿಂದ ಮರುಪರಿಶೀಲನೆ ನಡೆಸಬೇಕಾದ ಅಗತ್ಯ ಇದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರದ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ರೈತರಿಗೆ ಹೆಚ್ಚಿನ ಸಹಾಯ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಆಗುತ್ತಿರುವ ತೊಂದರೆಯನ್ನು ಆದಷ್ಟು ಶೀಘ್ರ ತಪ್ಪಿಸಬೇಕು’ ಎಂದೂ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.