ADVERTISEMENT

ಭಾರತಕ್ಕೆ ಸ್ವಯಂಕೃತ ಅಪರಾಧದ ಸಂಕಷ್ಟ: ಮನಮೋಹನ್ ಸಿಂಗ್ ವಿಶ್ಲೇಷಣೆ

‘ಕೋಮುಗಲಭೆ, ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 20:05 IST
Last Updated 6 ಮಾರ್ಚ್ 2020, 20:05 IST
ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌
ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌   

ಬೆಂಗಳೂರು: ‘ದೇಶದಲ್ಲಿ ಸಾಮಾಜಿಕ ಸಾಮರಸ್ಯವನ್ನು ಪುನರ್‌ಸ್ಥಾಪಿಸಲು, ಕುಂಟುತ್ತಿರುವ ಆರ್ಥಿಕತೆಯನ್ನು ಅಭಿವೃದ್ಧಿಯ ಹಳಿಗೆ ತರಲು ಮತ್ತು ಜಾಗತಿಕ ಪಿಡುಗಾಗಿರುವ ಕೋವಿಡ್‌–19 ಸೋಂಕಿನಿಂದ ದೇಶವನ್ನು ರಕ್ಷಿಸಲು ತಾವು ಹಾಕಿಕೊಂಡಿರುವ ಕಾರ್ಯಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಎದುರು ಬಹಿರಂಗಪಡಿಸಬೇಕು’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಒತ್ತಾಯಿಸಿದ್ದಾರೆ.

ದಿ ಹಿಂದೂ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಅವರು, ದೇಶ ಎದುರಿಸುತ್ತಿರುವ ಸಂಕಷ್ಟಗಳನ್ನು ವಿಶ್ಲೇಷಿಸಿದ್ದಾರೆ.

‘ಸಮಾಜದಲ್ಲಿ ಸಾಮರಸ್ಯಕ್ಕೆ ಕುತ್ತು ಬಂದಿದೆ. ದೇಶದ ಆರ್ಥಿಕತೆ ಕುಂಟುತ್ತಿದೆ. ಜತೆಗೆ ಕೋವಿಡ್‌–19 ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಈ ಮೂರೂ ಸಂಕಷ್ಟಗಳ ತ್ರಿಕೂಟವು ಭಾರತಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ. ಅಶಾಂತಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ ಸ್ವಯಂಕೃತ ಅಪರಾಧದ ಫಲಗಳು. ಇವು ಆರ್ಥಿಕ ಶಕ್ತಿಯಾಗಿ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಜಾಗತಿಕ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುತ್ತದೆ. ಆದರೆ, ಕೋವಿಡ್‌–19 ಜಾಗತಿಕವಾಗಿ ಬಂದೆರಗಿದ ಆಘಾತ’ ಎಂದು ಮನಮೋಹನ್ ಬರೆದಿದ್ದಾರೆ.

ADVERTISEMENT

‘ದೆಹಲಿ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಸಮಾಜಘಾತುಕ ಶಕ್ತಿಗಳು ಕೋಮುಗಲಭೆಯ ಕಿಡಿ ಹಚ್ಚಿವೆ, ರಾಜಕೀಯ ಪಕ್ಷಗಳು ಈ ಬೆಂಕಿಗೆ ತಿದಿ ಒತ್ತಿವೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಿದ್ದವರು, ಜನರನ್ನು ರಕ್ಷಿಸಬೇಕಿದ್ದ ತಮ್ಮ ಧರ್ಮವನ್ನು ಮರೆತಿದ್ದಾರೆ. ನ್ಯಾಯಾಂಗ ಮತ್ತು ಮಾಧ್ಯಮಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿವೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಉದಾರವಾದಿ ಆರ್ಥಿಕತೆಯಾಗಿ ಪ್ರಗತಿಯತ್ತ ಸಾಗುತ್ತಿದ್ದ ಭಾರತವು, ಕಳೆದ ಕೆಲವು ವರ್ಷಗಳಿಂದ ಕಲಹಭರಿತ ಹತಾಶ ಆರ್ಥಿಕತೆಯಾಗಿ ಕುಗ್ಗುತ್ತಿದೆ. ಹೂಡಿಕೆದಾರರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹೊಸ ಯೋಜನೆಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ.ಇಂತಹ ಕಳವಳದ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬರುವುದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಪಕ್ಕದ ಮೆನೆಗೆ ಯಾವಾಗ ಬೆಂಕಿ ಬೀಳುತ್ತದೆಯೋ ಎಂಬ ಭಯದ ವಾತಾವರಣವಿದ್ದಾಗ, ಯಾರು ಬಂಡವಾಳ ಹೂಡುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಬಂಡವಾಳ ಹೂಡಿಕೆ ಇಲ್ಲದಿದ್ದರೆ, ಉದ್ಯೋಗ ಸೃಷ್ಟಿಯಾಗುವುದಿಲ್ಲ. ಖರ್ಚು ಮಾಡಲು ಜನರ ಬಳಿ ದುಡ್ಡು ಇರುವುದಿಲ್ಲ.ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತದೆ. ಇದು ಬಂಡವಾಳ ಹೂಡಿಕೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಭಾರತದ ಆರ್ಥಿಕತೆಯು ಈ ವಿಷವರ್ತುಲದಲ್ಲಿ ಸಿಲುಕಿಕೊಂಡಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಈ ವಿಷಮ ಸ್ಥಿತಿಯಲ್ಲಿ ಕೋವಿಡ್–19 ಸೋಂಕು ಬಂದೆರಗಿದೆ. ಈಗಿನ ಒಂದೆರಡು ತಲೆಮಾರುಗಳು ಇಂತಹ ಪಿಡುಗನ್ನು ಎದುರಿಸಿಲ್ಲ. ಹೀಗಾಗಿ ಇಂತಹ ಪಿಡುಗುಗಳನ್ನು ಎದುರಿಸುವ ಮಾರ್ಗಗಳನ್ನು ಹೊಸದಾಗಿಯೇ ಕಂಡುಕೊಳ್ಳಬೇಕಿದೆ. ಆದರೆ, ಸರ್ಕಾರ ಅಂತಹ ಯಾವ ಕಾರ್ಯಯೋಜನೆಯನ್ನೂ ತೋರಿಸುತ್ತಿಲ್ಲ. ಈ ಸೋಂಕು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸರಕು ಮತ್ತು ಸೇವೆಗಳಿಗೆ ದೊಡ್ಡ ಬಾಗಿಲನ್ನು ತೆರೆದಿದೆ. ಆದರೆ, ಇದನ್ನು ಬಳಸಿಕೊಳ್ಳುವ ಸ್ಥಿತಿಯಲ್ಲಿ ಭಾರತ ಈಗ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದರೆ, ಮೊದಲಿಗೆ ಕೋವಿಡ್‌–19 ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ನಂತರ ಆರ್ಥಿಕತೆಗೆ ಉತ್ತೇಜನ ನೀಡುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದರೆ, ಹೂಡಿಕೆಯೂ ಏರಿಕೆಯಾಗುತ್ತದೆ. ಇದು ಆರ್ಥಿಕತೆಗೆ ಚಾಲನೆ ನೀಡುತ್ತದೆ. ಇವೆಲ್ಲವನ್ನೂ ಮಾಡಬೇಕೆಂದರೆ ಒಡೆದಾಳುವ ನೀತಿ ಮತ್ತು ಕ್ಷುಲ್ಲಕ ರಾಜಕಾರಣವನ್ನು ಕೈಬಿಡಬೇಕು’ ಎಂದು ಹೇಳಿದ್ದಾರೆ.

**

ದೇಶ ಎದುರಿಸುತ್ತಿರುವ ತ್ರಿವಳಿ ಸಂಕಷ್ಟವನ್ನು ಎದುರಿಸುವ ಬಗೆಯನ್ನು ಮೋದಿ ಅವರು ಜನರಿಗೆ ತಿಳಿಸಬೇಕು. ಅದು ಬರಿಯ ಮಾತಾಗಿರದೆ, ಕಾರ್ಯರೂಪಕ್ಕೆ ಬರಬೇಕು.
-ಡಾ.ಮನಮೋಹನ್ ಸಿಂಗ್,ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.