ADVERTISEMENT

ವರ್ಷದಲ್ಲಿ ₹3 ಕೋಟಿ ದಾಟಿದ ಧ್ವಜ ವಹಿವಾಟು

ಜ.23ರವರೆಗೆ ₹53‌ ಲಕ್ಷದ ತ್ರಿವರ್ಣ ಧ್ವಜ ಮಾರಾಟ

ಬಸೀರ ಅಹ್ಮದ್ ನಗಾರಿ
Published 25 ಜನವರಿ 2023, 21:51 IST
Last Updated 25 ಜನವರಿ 2023, 21:51 IST
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ತಯಾರಿಕೆ ಕೇಂದ್ರದಲ್ಲಿ ತ್ರಿವರ್ಣ ಧ್ವಜಗಳ ಹೊಲಿಗೆಯಲ್ಲಿ ಕಾರ್ಮಿಕರು ಮಗ್ನರಾಗಿರುವುದು  – ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ತಯಾರಿಕೆ ಕೇಂದ್ರದಲ್ಲಿ ತ್ರಿವರ್ಣ ಧ್ವಜಗಳ ಹೊಲಿಗೆಯಲ್ಲಿ ಕಾರ್ಮಿಕರು ಮಗ್ನರಾಗಿರುವುದು  – ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಇಲ್ಲಿನ ಬೆಂಗೇರಿಯಲ್ಲಿರುವಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಕೆಕೆಜಿಎಸ್‌ಎಸ್‌)
ತಯಾರಿಸುವ ಬಿಐಎಸ್‌ ಮಾನದಂಡವುಳ್ಳ ರಾಷ್ಟ್ರಧ್ವಜಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದ್ದು ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹3.17 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸಿದೆ.

ಸಂಘವು ಈ ತನಕದ ರಾಷ್ಟ್ರಧ್ವಜಗಳ ಮಾರಾಟದಲ್ಲಿ ನಡೆಸಿದ ಗರಿಷ್ಠ ದಾಖಲೆ ಇದಾಗಿದೆ.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಹರ್‌ ಘರ್‌ ತಿರಂಗಾ ಅಭಿಯಾನ, ಧಾರವಾಡ ಜಿಲ್ಲೆಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮ ಸೇರಿದಂತೆ ಹಲವು ಅಂಶಗಳು ರಾಷ್ಟ್ರಧ್ವಜಗಳ ಮಾರಾಟ ಹೆಚ್ಚಲು ಕಾರಣ’ ಎಂದು ಕೆಕೆಜಿಎಸ್‌ಎಸ್‌ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಮ್ಮಲ್ಲಿ ಒಂಬತ್ತು ಬಗೆಯ ಬಿಎಸ್‌ಐ ಮಾನದಂಡವುಳ್ಳ ಧ್ವಜಗಳನ್ನು ತಯಾರಿಸಲಾಗುತ್ತದೆ. 14x21 ಅಡಿ ಸೇರಿದಂತೆ ಬಹುತೇಕ ಎಲ್ಲ ಬಗೆಯ ರಾಷ್ಟ್ರಧ್ವಜಗಳು ಈ ಸಲ ಮಾರಾಟವಾಗಿವೆ. 2x3 ಅಡಿ, 3x4.5 ಅಡಿ, 4x6 ಅಡಿ ಅಳತೆಯಧ್ವಜಗಳಿಗೆ ಬೇಡಿಕೆ ತುಸು ಹೆಚ್ಚಾಗಿತ್ತು’ ಎಂದರು.

‘2022ರ ಏಪ್ರಿಲ್‌ನಿಂದ 2023ರ ಜನವರಿ 23ರ ತನಕ ಒಟ್ಟು 34,593ಕ್ಕೂ ಹೆಚ್ಚು ಧ್ವಜಗಳು ಮಾರಾಟವಾಗಿದ್ದು, ಒಟ್ಟು ತನಕ ₹3.17 ಕೋಟಿ ವಹಿವಾಟು ನಡೆದಿದೆ’ ಎಂದು ವಿವರಿಸಿದರು.

ಹೆಚ್ಚುವರಿ ದುಡಿಮೆ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಷ್ಟ್ರಧ್ವಜಗಳಿಗೆ ಬೇಡಿಕೆ ಹೆಚ್ಚಿದ್ದರಿಂದ, ಅವುಗಳನ್ನು ತಯಾರಿಸುವ ಕಾರ್ಮಿಕರಿಗೂ ಕೈತುಂಬ ಕೆಲಸವಿತ್ತು. 25 ಕಾರ್ಮಿಕರು ಬಹುತೇಕ ಮೂರು ತಿಂಗಳ ಕಾಲ ಹೆಚ್ಚುವರಿ ಕೆಲಸ(ಓ.ಟಿ) ಮಾಡಿದ್ದಾರೆ. ಈ ಕೆಲಸಕ್ಕಾಗಿ ಅವರಿಗೆ ಒಟ್ಟಾರೆ ಅಂದಾಜು ₹5 ಲಕ್ಷ ವೇತನ ಪಾವತಿಸಲಾಗಿದೆ’ ಎಂದೂ ಮಠಪತಿ ತಿಳಿಸಿದರು.

ಯುವಜನೋತ್ಸವಕ್ಕೆ 7,332 ಧ್ವಜ: ಈ ಬಾರಿ ರಾಷ್ಟ್ರೀಯ ಯುವಜನೋತ್ಸವ ಧಾರವಾಡ ಜಿಲ್ಲೆಯಲ್ಲಿಯೇ ನಡೆದಿದ್ದು, ರಾಷ್ಟ್ರಧ್ವಜ ಮಾರಾಟ ಹೆಚ್ಚಳಕ್ಕೆ ಕೊಡುಗೆ ನೀಡಿದೆ.

‘ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಹಾಗೂ ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳಿಗೆ ನೀಡಲು
ಜಿಲ್ಲಾಡಳಿತ ರಾಷ್ಟ್ರಧ್ವಜಗಳನ್ನು ಪೂರೈಸಲು ಸೂಚಿಸಿತ್ತು. ಜಿಲ್ಲಾಡಳಿತದ ನಿರ್ದೇಶನದಂತೆ 6x9 ಇಂಚಿನ 301, 4x6 ಇಂಚಿನ 7,005 ಹಾಗೂ 12x18 ಇಂಚಿನ 26 ರಾಷ್ಟ್ರಧ್ವಜ ಪೂರೈಸಲಾಯಿತು. ಅದರಿಂದ ಸಂಸ್ಥೆಗೆ ₹5.36 ಲಕ್ಷ ಆದಾಯ ಬಂದಿದೆ’ ಎಂದು ಮಠಪತಿ ತಿಳಿಸಿದರು.

ಬಿಐಎಸ್‌ ಮಾನದಂಡವಿಲ್ಲದ ವಿವಿಧ ಅಳತೆಯ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳ ಮಾರಾಟ ಒಟ್ಟಾರೆ ಮಾರಾಟದ ಶೇ 20ರಷ್ಟಿರುತ್ತದೆ ಎಂಬುದು ವಿಶೇಷ.

ಧ್ವಜಗಳ ವಿಲೇವಾರಿಗೆ ಕ್ರಮ

‘ಮನೆ–ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಟ ಅಭಿಯಾನದ ಬಳಿಕ ಕೆಲ ಸಂಘ –ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಿದ್ದ ಪಾಲಿಸ್ಟರ್‌ ಬಟ್ಟೆ ಸೇರಿ ದಂತೆ ವಿವಿಧ ಬಗೆಯ 850ಕ್ಕೂ ಹೆಚ್ಚು ರಾಷ್ಟ್ರಧ್ವಜಗಳನ್ನು ನಮಗೆ ನೀಡಿವೆ. ಅವುಗಳ ವಿಲೇವಾರಿಗೆ ಗಂಧದ ಕಟ್ಟಿಗೆಯಲ್ಲಿ ಸುಡುವುದು ಹಾಗೂ 3x6 ಅಡಿ ತೆಗ್ಗು ತೋಡಿ ಹೂಳುವುದು ಹೀಗೆ ಎರಡು ವಿಧಾನಗಳಿವೆ. ಶೀಘ್ರವೇ ಅವುಗಳ ನಿಯಮಬದ್ಧ ವಿಲೇವಾರಿಗೆ ಕ್ರಮ ವಹಿಸಲಾಗುವುದು’ ಎಂದು ಮಠಪತಿ ತಿಳಿಸಿದರು.

***

ಖರ್ಚು ವೆಚ್ಚ ಸಮಿತಿ ನಿರ್ದೇಶನದಂತೆ 2022ರ ಅ. 1ರಿಂದ ವಿವಿಧ ಅಳತೆಯ ರಾಷ್ಟ್ರ ಧ್ವಜಗಳ ದರವನ್ನು ಶೇ10ರಿಂದ ಶೇ12ರಷ್ಟು ಹೆಚ್ಚಿಸಲಾಗಿದೆ

– ಶಿವಾನಂದ ಮಠಪತಿ, ಕೆಕೆಜಿಎಸ್‌ಎಸ್‌ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.