ಬೆಂಗಳೂರು: ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ನಿಧನರಾಗಿದ್ದು, ಅವರಿಗೆ 97 ವರ್ಷ ವಯಸ್ಸಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಹಿರಿಯ ಪತ್ರಕರ್ತ, ಸಂಪಾದಕ ಮತ್ತು ಲೇಖಕ ಟಿಜೆಎಸ್ ಜಾರ್ಜ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತೀಕ್ಷ್ಣವಾದ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದರು ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಓದುಗರನ್ನು ಯೋಚಿಸುವಂತೆ, ಪ್ರಶ್ನಿಸುವಂತೆ ಮತ್ತು ತೊಡಗಿಸಿಕೊಳ್ಳುವಂತೆ ಮಾಡಿದ ನಿಜವಾದ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು. ಅವರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.ಎಂದು ತಿಳಿಸಿದ್ದಾರೆ.
ಖ್ಯಾತ ಪತ್ರಕರ್ತ ಟಿ.ಜೆ.ಎಸ್ ಜಾರ್ಜ್ ಅವರು ನಿಧನ ಹೊಂದಿರುವ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ನೋವಾಯಿತು. ಭಾರತೀಯ ಪತ್ರಿಕಾ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಟಿ.ಜೆ.ಎಸ್. ಜಾರ್ಜ್ ಅವರು ಅಂಕಣಕಾರರಾಗಿ ರಾಜಕೀಯ ವಿದ್ಯಮಾನಗಳ ವಿಶ್ಲೇಷಣೆ ಮೂಲಕ ರಾಜಕೀಯ ವ್ಯವಸ್ಥೆಯನ್ನು ಸದಾ ಜಾಗೃತಗೊಳಿಸುವ ಕೆಲಸ ಮಾಡಿದ್ದರು.
ಸುಮಾರು 25 ವರ್ಷಗಳ ಕಾಲ ನಿರಂತರ ಅಂಕಣಕಾರರಾಗಿ ಸಾಮಾಜಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ದ ನಿರಂತರ ತಮ್ಮ ಲೇಖನಿ ಮೂಲಕ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಅವರ ಅಗಲಿಕೆಯಿಂದ ಭಾರತೀಯ ಪತ್ರಿಕಾರಂಗ ಒಬ್ಬ ಹಿರಿಯ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರು ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.