‘ನಮ್ಮದು ಜಾತ್ಯತೀತ ಪಕ್ಷ. ಅಭಿವೃದ್ಧಿ ಮಾನದಂಡ. ಚುನಾವಣೆಗಳಲ್ಲಿನ ಸೋಲಿನ ಆತ್ಮಾವಲೋಕನ ಮಾಡಿಕೊಂಡು ತಳಮಟ್ಟದಿಂದ ಪಕ್ಷ ಕಟ್ಟುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರೆ, ‘ಕಾಂಗ್ರೆಸ್ ದುರ್ಬಲವಾದ ಕಡೆಗಳಲ್ಲಿ ಬಿಜೆಪಿ ಅಥವಾ ಪರ್ಯಾಯ ರಾಜಕೀಯ ಪಕ್ಷ ಬಂದಿದೆ. ಸೋತರೂ ನಾವು ಮತ್ತೆ ಉತ್ಸಾಹದಲ್ಲಿ ಕೆಲಸ ಮಾಡುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಪಾದಿಸಿದರು.
‘ಗೆಲ್ಲಲೇ ಬೇಕೆಂಬ ಕಾರ್ಯತಂತ್ರ, ಛಲ ಕಾಂಗ್ರೆಸ್ಸಿನಲ್ಲಿಲ್ಲ. ಬಿಜೆಪಿಯ ಕಾರ್ಯಸೂಚಿ ಎದುರಿಸುವುದಕ್ಕಷ್ಟೆ ಸೀಮಿತ. ಆದರೆ, ಧರ್ಮ, ಜಾತಿ ಆಧಾರಿತ ಗೆಲುವಿಗೆ ಮಿತಿಯಿದೆ’ ಎಂದರು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ.
‘ಕಾಂಗ್ರೆಸ್ ಪಕ್ಷ ಮತ್ತೆ ರಾಷ್ಟ್ರಮಟ್ಟದಲ್ಲಿ ಮೇಲೆದ್ದು ಬರಬಹುದೇ?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಸೋಮವಾರ ಏರ್ಪಡಿಸಿದ್ದ ಫೇಸ್‌ಬುಕ್ ಸಂವಾದದಲ್ಲಿ ಈ ಮೂವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಆಯ್ದ ಅಂಶ ಇಲ್ಲಿದೆ.
ಪಕ್ಷ ಪುನಃಶ್ಚೇತನ ಆಗಿಯೇ ಆಗುತ್ತದೆ
ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ನಿಜ. ಆದರೆ, ನಾವು (ಕಾಂಗ್ರೆಸ್) ಮತ್ತು ಬಿಜೆಪಿ ಪಡೆದ ಮತಗಳ ಅಂತರ ಕೇವಲ ಶೇ 2. ಅಸ್ಸಾಂನಲ್ಲಿ ನಮ್ಮ ನಾಯಕರು ಬಿಜೆಪಿಗೆ ಹೋಗಿದ್ದರಿಂದ ಸಮಸ್ಯೆ ಆಯಿತು. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಹೊಂದಾಣಿಕೆಯಲ್ಲಿ 25 ಕ್ಷೇತ್ರಗಳಲ್ಲಿ 17 ಗೆದ್ದಿದ್ದೇವೆ. ಕೇರಳದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯ ಆಗದಿರಲು ನಾನಾ ಕಾರಣಗಳಿವೆ. ಸೋಲನ್ನು ಆತ್ಮಾವಲೋಕನ ಮಾಡಿಕೊಂಡು, ಮತ್ತೆ ಪಕ್ಷ ಸಂಘಟಿಸಲು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷೆ ತಂಡ ರಚಿಸಿದ್ದಾರೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುವುದಿಲ್ಲವೇನೊ ಎಂಬ ಸಂದರ್ಭದಲ್ಲಿಯೂ (80ರ ದಶಕ) ಮತ್ತೆ ಅಧಿಕಾರಕ್ಕೆ ಬಂದಿದೆ. ಪಕ್ಷ ಪುನಶ್ಚೇತನ ಆಗಿಯೇ ಆಗುತ್ತದೆ. ಧರ್ಮಕ್ಕೋ, ಭಾಷೆಗೊಕಾಂಗ್ರೆಸ್ ಸೀಮಿತವಲ್ಲ. ಭಾವನಾತ್ಮಕ ವಿಷಯ ಮುಂದಿಟ್ಟು ಬಿಜೆಪಿಯವರು ಗೆಲ್ಲುತ್ತಾರೆ. ರಾಷ್ಟ್ರೀಯತೆ ವಿಷಯದಲ್ಲಿ ಸುಳ್ಳು ಪ್ರಚಾರ ಮಾಡುತ್ತಾರೆ. ಜನರಿಗೆ ಅವರ ಮೇಲಿದ್ದ ನಂಬಿಕೆ, ವಿಶ್ವಾಸ ನಕಾರಾತ್ಮವಾಗುತ್ತಿದೆ. ಜಾತ್ಯತೀತ ನಿಲುವು, ಅಭಿವೃದ್ಧಿ ಇಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ. ಬಿಜೆಪಿಯ ವೈಫಲ್ಯಗಳು ನಮಗೆ ಅನುಕೂಲವಾಗಲಿದೆ. ಬಿಜೆಪಿಯ ಹಿರಿಯ ಸದಸ್ಯರೇ ಆ ಪಕ್ಷದೊಳಗಿನ ಭ್ರಷ್ಟಾಚಾರ, ಆಡಳಿತ ಕುಸಿತ ಬಗ್ಗೆ ಬೆರಳು ತೋರಿಸುತ್ತಿದ್ದಾರೆ.
– ಆರ್. ಧ್ರುವನಾರಾಯಣ,ಕಾರ್ಯಾಧ್ಯಕ್ಷ, ಕೆಪಿಸಿಸಿ
ಪ್ರತಿಕ್ರಿಯೆಯ ಆಚೆಗೆ ನಿಲ್ಲದೇ ಇರುವುದು ಕಾಂಗ್ರೆಸ್ ದೌರ್ಬಲ್ಯ
ಮತ್ತೆ ಎದ್ದು ನಿಲ್ಲಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ, ಆ ಕಾರ್ಯತಂತ್ರ ಇಲ್ಲ. ಪಶ್ಚಿಮ ಬಂಗಾಳವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ರಂಗಕ್ಕಿಳಿದು ತೋರಿದ ಛಲ ನಮ್ಮ ಮುಂದಿದೆ. ರಾಷ್ಟ್ರೀಯ ಪಕ್ಷದಲ್ಲಿರಬೇಕಾದ ಗೆಲ್ಲಲೇಬೇಕೆಂಬ ಛಲ ಕಾಂಗ್ರೆಸ್‌ನಲ್ಲಿ ಕಾಣುತ್ತಿಲ್ಲ. ಹಿಂದೆ ಇದ್ದ ಕಾಂಗ್ರೆಸ್ ಇವತ್ತೂ ಇದೆಯೇ ಎಂಬ ಅನುಮಾನ ಮೂಡುತ್ತದೆ. ಆ ಪಕ್ಷದಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ನಾಯಕರು ಈಗ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ, ಆ ಪಕ್ಷ ಬೆಳೆಸಿ, ತಾವೂ ಬೆಳೆದಿದ್ದಾರೆ. ಈ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆಯೇ ಎನ್ನುವುದು ಮುಖ್ಯ. ಕಾಂಗ್ರೆಸ್ ತಳಮಟ್ಟದ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯ ಕಾರ್ಯಸೂಚಿಗೆ ಕಾಂಗ್ರೆಸ್ ಪ್ರತಿಕ್ರಿಯಿಸುವ ಕೆಲಸವನ್ನಷ್ಟೆ ಮಾಡುತ್ತಿದೆ. ಪಕ್ಷವೊಂದು ಯಾವ ಪರಿಕಲ್ಪನೆಯನ್ನು ಮತದಾರನ ಮುಂದಿಡುತ್ತದೆ, ಮತದಾರಯಾವುದನ್ನು ಒಪ್ಪಿಕೊಳ್ಳುತ್ತಾನೆ ಎನ್ನುವುದು ಮುಖ್ಯ. 2014ರಲ್ಲಿ ಅಭಿವೃದ್ಧಿ ಯೋಜನೆ ಮುಂದಿಟ್ಟಿದ್ದ ಮೋದಿ, 2019ರಲ್ಲಿ ಬಿಎಸ್‌ಎಫ್ ದಾಳಿ, ಪಾಕಿಸ್ತಾನ ಜೊತೆಗಿನ ಗಡಿ ಗಲಾಟೆ ಮುಂದೆ ತಂದರು. ಚಾಣಾಕ್ಷತನದಿಂದ ಬಿಜೆಪಿ ಜನರ ಬಳಿ ಹೋಗಿದೆ. ಈ ನಡೆಯನ್ನು ಎದುರಿಸಲು ಕಾಂಗ್ರೆಸ್ ವಿಫಲವಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಧರ್ಮದಲ್ಲಿ ಹೆಸರಿನಲ್ಲಿ ಮತಗಳ ಧ್ರುವೀಕರಣ ನಡೆದಿದೆ. ರಾಜ್ಯದಲ್ಲಿ ಎರಡೂ ಪಕ್ಷಗಳಲ್ಲಿ (ಬಿಜೆಪಿ, ಕಾಂಗ್ರೆಸ್) ಆಂತರಿಕ ಸಮಸ್ಯೆಗಳಿವೆ. ಅದನ್ನು ಪರಿಹರಿಸಿಕೊಂಡು, ಸಂಘಟಿತವಾದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ.
– ಸಂದೀಪ್ ಶಾಸ್ತ್ರಿ,ರಾಜಕೀಯ ವಿಶ್ಲೇಷಕ
ವಂಶಪಾರಂಪರ್ಯಕ್ಕೆ ವಿರುದ್ಧವಾಗಿರುವ ಜನರ ಪಕ್ಷ
ಕಾಂಗ್ರೆಸ್ ಕೇಂದ್ರವಾಗಿ ಸುತ್ತುತ್ತಿದ್ದ ಪಕ್ಷಗಳೆಲ್ಲ ಇವತ್ತು ಬಿಜೆಪಿಯನ್ನು ಕೇಂದ್ರ ಬಿಂದುವಾಗಿಟ್ಟು ಸುತ್ತುತ್ತಿವೆ. ಕಾಂಗ್ರೆಸ್ ದುರ್ಬಲವಾದ ಕಡೆಗಳೆಲ್ಲ ಬಿಜೆಪಿ ಅಥವಾ ಸ್ಥಳೀಯ ರಾಜಕೀಯ ಪಕ್ಷ ಪರ್ಯಾಯವಾಗಿ ಮೇಲೆ ಬಂದಿರುವುದನ್ನು ಕಾಣಬಹುದು. ಯಾವುದೇ ಪಕ್ಷಕ್ಕೆ ಸಿದ್ಧಾಂತ, ನಾಯಕತ್ವ, ಕಾರ್ಯಪದ್ಧತಿ ಮುಖ್ಯ. ಅದನ್ನು ಆಧರಿಸಿ ಬೆಳೆದ ಕಾರ್ಯಕರ್ತರೂ ಅಗತ್ಯ. ನಮಗೆ (ಬಿಜೆಪಿ) ಪುನರ್ ನಿರ್ಮಾಣದಲ್ಲಿ ನಂಬಿಕೆ. ನಮ್ಮ ಸಿದ್ಧಾಂತದಲ್ಲಿ ಗೊಂದಲ ಇಲ್ಲ. ನಾಯಕರೆಲ್ಲ ಕಾರ್ಯಕರ್ತರ ಮೂಸೆಯಿಂದ,ಜನಮಾನಸದ ಮಧ್ಯದಿಂದ ಬಂದವರು. ಮೋದಿ ನಮ್ಮ ಪರಮೋಚ್ಚ ನಾಯಕ. ಆದರೆ, ಅವರೂ ಸೇರಿದಂತೆ ಎಲ್ಲರೂ ಪಕ್ಷದ ವೇದಿಕೆಯಲ್ಲಿ ಪ್ರಶ್ನೆಗೆ ಒಳಗಾಗುವವರೇ. ಯಾವುದೇ ವ್ಯಕ್ತಿಗತ ನಿರ್ಣಯ ಇಲ್ಲ. ಪಕ್ಷದ ಸಂಸದೀಯ ಮಂಡಳಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಸರ್ಕಾರದ ಕಾರ್ಯಯೋಜನೆ, ನೀತಿಯಲ್ಲಿ ಓಲೈಕೆ ಇಲ್ಲ. ಜನಧನ್, ಕಿಸಾನ್ ಸಮ್ಮಾನ್, ಮುದ್ರಾ ಸರ್ವಧರ್ಮದವರಿಗೂ ಸಂಬಂಧಿಸಿದ್ದು. ಕಾಂಗ್ರೆಸ್‌ನಂತೆ ಅನುಕೂಲ ರಾಜಕೀಯ ನಮ್ಮದಲ್ಲ. ನಮ್ಮ ಸರ್ಕಾರ ಯಾವುದೇ ಧರ್ಮ, ಜಾತಿಗೆ ತಾರತಮ್ಯ ಮಾಡಿಲ್ಲ. ಗೆಲ್ಲುವ ಅಭ್ಯರ್ಥಿ ಯಾರೇ ಆಗಿದ್ದರೂ, ಪಕ್ಷದ ಕಾರ್ಯಕರ್ತ ಆಗಿದ್ದರೆ ಟಿಕೆಟ್ ಕೊಟ್ಟಿದ್ದೇವೆ. ಜಾತ್ಯತೀತ ಎಂದು ಹೇಳಿಕೊಂಡು ಮುಸ್ಲಿಂ ಲೀಗ್, ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡವರು ಯಾರು? ಶಾದಿಭಾಗ್ಯ ಯೋಜನೆ ಓಲೈಕೆ ಅಲ್ಲವೇ? ‘ಕಾಂಗ್ರೆಸ್ ಮುಕ್ತ’ ಎಂದರೆ ಭ್ರಷ್ಟಾಚಾರ, ವಂಶಪಾರಂಪರ್ಯ ಮುಕ್ತ ಎಂದರ್ಥ. ನಮ್ಮಲ್ಲಿ ವಂಶಪಾರಂಪರ್ಯಕ್ಕೆ ಅವಕಾಶವಿಲ್ಲ.
– ಸಿ.ಟಿ. ರವಿ,ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.