ಬೆಂಗಳೂರು: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಮಲೇಬೆನ್ನೂರಿನ ‘ಸರ್ಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲೆ’ಗೆ ಸೇರಿದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಉದ್ದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಮಲೇಬೆನ್ನೂರಿನ ಎಚ್.ಸುರೇಶ್ ಸೇರಿದಂತೆ ಒಟ್ಟು 13 ಜನ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪಿ.ಎಚ್.ವಿಶ್ವನಾಥಯ್ಯ, ‘ಶಾಲೆಗೆ ಸೇರಿದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು (ಎಸ್‌ಡಿಎಂಸಿ) ಶಾಲೆಯ ಜಾಗವನ್ನು ಕ್ಯಾಂಟೀನ್ ನಿರ್ಮಾಣಕ್ಕೆ ಬಳಸದಂತೆ ನಿರ್ಣಯ ಕೈಗೊಂಡಿದೆ. ಈ ನಿರ್ಧಾರವನ್ನು ಪರಿಗಣಿಸದೆ ಜಿಲ್ಲಾಡಳಿತ ಅಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದೆ’ ಎಂದು ಆಕ್ಷೇಪಿಸಿದರು.
‘ಶೈಕ್ಷಣಿಕ ಉಪಯೋಗಕ್ಕಾಗಿ ಬಳಸಬೇಕಾದ ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟರೆ ಅಲ್ಲಿರುವ ಉಳಿದ ಜಾಗವನ್ನೂ ಬೇರೆ ಬೇರೆ ಇಲಾಖೆಗಳು ತಮ್ಮ ವಶಕ್ಕೆ ಪಡೆಯಲು ಮುಂದಾಗಬಲ್ಲವು. ಆದ್ದರಿಂದ, ಅದಕ್ಕೆ ದಾರಿ ಮಾಡಿಕೊಡಬಾರದು’ ಎಂದು ಮನವಿ ಮಾಡಿದರು.
ಇದನ್ನು ಅಲ್ಲಗಳೆದ ಸರ್ಕಾರದ ಪರ ವಕೀಲರು, ‘ಶಾಲೆಗೆ ಸೇರಿದ ಒಂದು ಎಕರೆ 33 ಗುಂಟೆ ಜಾಗದಲ್ಲಿನ ಹಳೆಯ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿ ಅಲ್ಲಿದ್ದ 12 ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ವಲ್ಪಮಾತ್ರದ ಜಾಗವನ್ನು ಬಳಕೆ ಮಾಡಲಾಗುತ್ತಿದೆ. ಉಳಿದ ಜಾಗವು ಶಾಲೆಯ ಸುರ್ಪದಿಯಲ್ಲಿಯೇ ಇರುತ್ತದೆ’ ಎಂದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸದ್ಯ ಶಾಲಾ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ ಮತ್ತು ಶಾಲೆಯಲ್ಲಿ ಕೇವಲ 12 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರನ್ನು ಬೇರೆ ಶಾಲೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ಅಂತೆಯೇ, ಒಂದು ಎಕರೆ 33 ಗುಂಟೆ ಜಾಗದಲ್ಲಿ ಕೇವಲ 60x60 ಜಾಗವನ್ನು ಮಾತ್ರ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಊಟ-ತಿಂಡಿ ಒದಗಿಸಲು ಕ್ಯಾಂಟೀನ್‌ಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ, ಈ ಅರ್ಜಿಯನ್ನು ಪುರಸ್ಕರಿಸಲಾಗದು’ ಎಂದು ಹೇಳಿತು.
‘ಅರ್ಜಿಯಲ್ಲಿ ಪರಿಗಣಿಸುವಂತಹ ಯಾವುದೇ ಗಂಭೀರ ಅಂಶಗಳಿಲ್ಲ. ಇದು ಸರ್ಕಾರದ ನೀತಿ-ನಿರೂಪಣೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.