ಸಿದ್ದರಾಮಯ್ಯ
ಬೆಂಗಳೂರು: ‘ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾದ ತಂತ್ರಾಂಶ ಅಳವಡಿಸಿ, ಅದರ ಆಧಾರದಲ್ಲಿ ಪಡಿತರ ಚೀಟಿದಾರರಿಗೆ ‘ಇಂದಿರಾ’ ಆಹಾರ ಕಿಟ್ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕಿಲೋ ಅಕ್ಕಿಯ ಬದಲು ‘ಇಂದಿರಾ’ (ಐಎನ್‌ಡಿಐಆರ್‌ಎ – ಇಂಟೆಗ್ರೇಟೆಡ್ ನ್ಯೂಟ್ರಿಷಿಯನ್ ಆ್ಯಂಡ್ ಡಯೆಟರಿ ಇನಿಷಿಯೇಟಿವ್ ಫಾರ್ ರಿವೈಟಲೈಷಿಂಗ್ ಅನ್ನಭಾಗ್ಯ ಬೆನಿಫಿಷರೀಸ್– ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸುವ ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮ) ಆಹಾರ ಕಿಟ್ ಯೋಜನೆಯ ಅನುಷ್ಠಾನದ ಕುರಿತು ಮುಖ್ಯಮಂತ್ರಿ ಸೋಮವಾರ ಸಭೆ ನಡೆಸಿದರು.
‘ಕಿಟ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಆಗಬಾರದು. ಅಳತೆಯಲ್ಲಿ ಹೆಚ್ಚು ಕಡಿಮೆ ಆಗದಂತೆಯೂ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ದೂರಿಗೆ ಅವಕಾಶ ಆಗದಂತೆ, ನಾಫೆಡ್, ಎನ್‌ಸಿಎಫ್‌ನಂತಹ ಕೇಂದ್ರ ಸರಬರಾಜು ಸಂಸ್ಥೆಗಳ ಮೂಲಕ ಅಥವಾ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೆಟಿಪಿಪಿ ಕಾಯ್ದೆ ಅನ್ವಯ ಕೈಗೊಳ್ಳಲು ಕ್ರಮ ತೆಗೆದುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.
‘ಪೂರೈಕೆಯಾದ ಕಿಟ್‌ಗಳನ್ನು ನಿಗಮದ ಗೋದಾಮು ಅಥವಾ ಸಗಟು ಮಳಿಗೆಗಳ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳ 10ನೇ ತಾರೀಕಿನ ಒಳಗೆ ವಿತರಿಸಬೇಕು. ಕಿಟ್‌ನಲ್ಲಿ ಪೌಷ್ಟಿಕಾಂಶಗಳಿಂದ ಕೂಡಿರುವ ತೊಗರಿ ಬೇಳೆ ಗರಿಷ್ಠ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದೂ ಸೂಚನೆ ನೀಡಿದರು.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.