ADVERTISEMENT

ಇಸ್ರೇಲ್‌ ಮಾದರಿ ಕೃಷಿ ಉತ್ತೇಜನಕ್ಕೆ ಉತ್ಕೃಷ್ಟತಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 15:24 IST
Last Updated 16 ಜೂನ್ 2021, 15:24 IST

ಬೆಂಗಳೂರು: ಭಾರತದಲ್ಲಿ ಇಸ್ರೇಲ್‌ ಮಾದರಿಯ ಕೃಷಿ ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ ರಾಜ್ಯದ ಬಾಗಲಕೋಟೆ, ಕೋಲಾರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ‘ಇಂಡೋ– ಇಸ್ರೇಲ್‌ ಉತ್ಕೃಷ್ಟತಾ ಕೇಂದ್ರ‘ಗಳನ್ನು ಬುಧವಾರ ವರ್ಚ್ಯುಯಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮತ್ತು ಭಾರತದಲ್ಲಿನ ಇಸ್ರೇಲ್‌ ರಾಯಭಾರಿ ಡಾ. ರಾನ್‌ ಮಲ್ಕಾ ವರ್ಚ್ಯುಯಲ್‌ ಆಗಿ ಈ ಕೇಂದ್ರಗಳನ್ನು ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ತೋಟಗಾರಿಕಾ ಸಚಿವ ಎನ್‌. ಶಂಕರ್‌ ಮತ್ತು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ದಕ್ಷಿಣ ಭಾರತಕ್ಕೆ ಇಸ್ರೇಲ್‌ ಕಾನ್ಸಲ್‌ ಜನರಲ್‌ ಜೋನಾಥನ್‌ ಜಡ್ಕಾ ಸಮಾರಂಭದಲ್ಲಿದ್ದರು.

ಈ ಮೂರೂ ಉತ್ಕೃಷ್ಟತಾ ಕೇಂದ್ರಗಳು ತೋಟಗಾರಿಕಾ ಬೆಳೆಗಳಲ್ಲಿ ಸುಧಾರಣೆ ತರುವ ದಿಕ್ಕಿನಲ್ಲಿ ಕೆಲಸ ಮಾಡಲಿವೆ. ಹಳೆಯ ತೋಟಗಳ ಪುನರುಜ್ಜೀವನ, ಹೊಸ ತೋಟಗಳ ನಿರ್ಮಾಣ, ನೀರು ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತು ಈ ಕೇಂದ್ರಗಳ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಇಲ್ಲಿಯೇ ರೈತರಿಗೆ ತರಬೇತಿ ನೀಡುವ ವ್ಯವಸ್ಥೆಯೂ ಇರಲಿದೆ.

ADVERTISEMENT

ಇಸ್ರೇಲ್‌ ತಂತ್ರಜ್ಞಾನ ಆಧರಿಸಿ ಬೇರು ಕಾಂಡಗಳ ಬಳಕೆಯ ವಿಧಾನವನ್ನು ಒಳಗೊಂಡಿರುವ ಅತ್ಯಾಧುನಿಕ ನರ್ಸರಿಗಳನ್ನು ಸ್ಥಾಪಿಸಲಾಗುತ್ತದೆ. ಕೋಲಾರದ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ನಲ್ಲಿ (ಸಿಒಇ) ಮಾವು ಬೆಳೆಯಲ್ಲಿನ ಅತ್ಯುತ್ತಮವಾದ ಕೃಷಿ ವಿಧಾನಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಈ ಉತ್ಕೃಷ್ಟತಾ ಕೇಂದ್ರಗಳು ಕರ್ನಾಟಕದಲ್ಲಿ ತೋಟಗಾರಿಕಾ ಬೆಳೆಗಳ ಉತ್ಪಾದನೆ ವೃದ್ಧಿ, ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿವೆ. ಹೊಸ ತಂತ್ರಜ್ಞಾನಗಳು ರೈತರಿಗೆ ಲಭ್ಯವಾಗಲಿದ್ದು, ಸುಸ್ಥಿರ ಕೃಷಿ ಮತ್ತು ಹೆಚ್ಚಿನ ಗಳಿಕೆಗೆ ನೆರವಾಗಲಿವೆ’ ಎಂದರು.

ಉತ್ಕೃಷ್ಟ ಗ್ರಾಮಗಳ ನಿರ್ಮಾಣಕ್ಕೆ ಯೋಜನೆ

ಭಾರತ ಮತ್ತು ಇಸ್ರೇಲ್‌ ಸಹಯೋಗದಲ್ಲಿ ಮಾದರಿ ಕೃಷಿ ಪರಿಸರವನ್ನು ಒಳಗೊಂಡ ‘ಉತ್ಕೃಷ್ಟ ಗ್ರಾಮ’ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಬಾಗಲಕೋಟೆ ಮತ್ತು ಕೋಲಾರ ಉತ್ಕೃಷ್ಟತಾ ಕೇಂದ್ರಗಳ ಜತೆ ಸಂಪರ್ಕ ಹೊಂದಿರುವ 10 ಹಳ್ಳಿಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.