ಬೆಂಗಳೂರು: ರಾಜ್ಯ ಸರ್ಕಾರ ಸರಳ, ಸುಗಮ ಮತ್ತು ಉದ್ಯಮಸ್ನೇಹಿ ಉಪಕ್ರಮಗಳಿಗೆ ಬದ್ಧವಾಗಿದ್ದು, ವಿವಿಧ ರೀತಿಯ ಅನುಮತಿ, ಪರವಾನಗಿಯನ್ನು ಒಂದೇ ವ್ಯವಸ್ಥೆ ಮೂಲಕ ನೀಡಲು ‘ಏಕಗವಾಕ್ಷಿ’ ಯೋಜನೆ ರೂಪಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ವಿವಿಧ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
‘ಏಕಗವಾಕ್ಷಿಗೆ ಅಗತ್ಯವಾದ ತಂತ್ರಾಂಶವನ್ನು ಜನವರಿ ಒಳಗೆ ಅಳವಡಿಸಿಕೊಳ್ಳಲಾಗುವುದು. ತಂತ್ರಾಂಶದ ಭಾಗವಾಗಲು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಗಡುವು ನೀಡಲಾಗಿದೆ. ಹೂಡಿಕೆ ಯೋಜನೆಗಳಿಗೆ ಮಂಜೂರಾತಿ, ಕೈಗಾರಿಕಾ ನಿವೇಶನ, ಕೈಗಾರಿಕಾ ಪ್ರದೇಶಗಳಲ್ಲಿ ಇರುವ ನಾಗರಿಕ ಸೌಲಭ್ಯದ ನಿವೇಶನ ಇತ್ಯಾದಿಗಳ ಹಂಚಿಕೆಯು ಈಗಿರುವ ಬಹುಹಂತಗಳ ಅನುಮತಿ ವಿಧಾನದಿಂದ ವಿಳಂಬವಾಗುತ್ತಿದೆ. ಏಕಗವಾಕ್ಷಿ ವ್ಯವಸ್ಥೆ ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಲಿದೆ’ ಎಂದರು.
‘ನೂತನ ಏಕಗವಾಕ್ಷಿ ವ್ಯವಸ್ಥೆ ಸಂಪೂರ್ಣ ಆನ್‌ಲೈನ್ ಮೂಲಕ ಕಾರ್ಯನಿರ್ವಹಿಸಲಿದೆ. ಉದ್ಯಮಿಗಳು ತಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿದರೆ ಮಿಕ್ಕೆಲ್ಲ ವಿವರಗಳು ತಾವಾಗಿಯೇ ದೊರೆಯುತ್ತವೆ. ಇದು ಸುಲಲಿತ ಕೈಗಾರಿಕಾ ಸಂಸ್ಕೃತಿಯ ಭಾಗವಾಗಿದೆ’ ಎಂದು ವಿವರ ನೀಡಿದರು.
‘ಏಕಗವಾಕ್ಷಿ ತಂತ್ರಾಂಶವನ್ನು ಮೈಕ್ರೋಸಾಫ್ಟ್ ಕಂಪನಿ ಸಿದ್ಧಪಡಿಸಿದೆ. ಎಲ್ಲ ಇಲಾಖೆಗಳ ಜೋಡಣೆ ಬಾಕಿ ಇದೆ. ಅದನ್ನು ತ್ವರಿತವಾಗಿ ಮಾಡಬೇಕು. ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಇನ್ನೊಂದು ಸಭೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಇ-ಆಡಳಿತ ಇಲಾಖೆಯ ಮುಖ್ಯಸ್ಥ ಉಜ್ವಲ್ ಕುಮಾರ್ ಘೋಷ್, ಕೆಐಎಡಿಬಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.