ಬೆಂಗಳೂರು: ‘ಯಾವುದೇ ಜಿಲ್ಲೆಯಲ್ಲಿ ಶೇ 80ರಿಂದ 90ರಷ್ಟು ಬಿಪಿಎಲ್ ಪಡಿತರ ಚೀಟಿ ಇರುವುದನ್ನು ಒಪ್ಪಲು ಸಾಧ್ಯವಿಲ್ಲ. ನಕಲಿ ಮತ್ತು ಅನರ್ಹ ಕಾರ್ಡ್‌ಗಳನ್ನು ತಡೆ ಹಿಡಿಯಲೇಬೇಕು’ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿಗಳು ಮತ್ತು ಸಿಇಒಗಳ ಜೊತೆ ಶನಿವಾರವೂ ಸಭೆ ನಡೆಸಿದ ಮುಖ್ಯಮಂತ್ರಿ, ‘ಅನರ್ಹ ಪಡಿತರ ಚೀಟಿದಾರರ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದಕ್ಕೆ ಕಾರಣ ಏನು? ಯಾವ ಜಿಲ್ಲೆಯಲ್ಲೂ ಶೇ 60ಕ್ಕಿಂತ ಹೆಚ್ಚು ಅರ್ಹರು ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಶಿಕ್ಷಕರು, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಪಡಿತರ ಚೀಟಿಗಳಿವೆ. ಆ ಪೈಕಿ, ಹಲವರು ಪಡಿತರ ಪಡೆಯುವುದಿಲ್ಲ. ಆದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸೇರಿದಂತೆ ಇತರೆ ಅಗತ್ಯಗಳಿಗೆ ಬಳಸುತ್ತಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಅರ್ಹರಿಗೆ ಸವಲತ್ತು ತಪ್ಪದಂತೆ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಲು ಏನೇನು ಮಾಡಬಹುದು’ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ‘ಪ್ರಾಯೋಗಿಕ ಅನುಭವದಲ್ಲಿ ಏನೇನು ಸಮಸ್ಯೆಗಳನ್ನು ಎದುರಿಸಿದ್ದೀರಿ, ಆ ಸಮಸ್ಯೆಗಳ ಪರಿಹಾರಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ’ ಎಂದು ಕೇಳಿ ಮಾಹಿತಿ ಪಡೆದರು.
‘ಹಿಂದುಳಿದವರು, ದಲಿತರು, ಅಶಿಕ್ಷಿತರು ಇರುವ ಕಡೆ ಬಾಲ್ಯ ವಿವಾಹ, ಬಾಲಗರ್ಭಿಣಿ ಪ್ರಕರಣ ನಡೆಯುತ್ತಿದ್ದು, ಅವುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ಹಾಕಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳಿಗೆ ಭೂಸ್ವಾಧೀನ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದಾಗ ಗರಂ ಆದ ಮುಖ್ಯಮಂತ್ರಿ, ‘ಅಗತ್ಯ ಬಿದ್ದರೆ ಭೂ ಸ್ವಾಧೀನಕ್ಕಾಗಿಯೇ ವಿಶೇಷ ಅಧಿಕಾರಿಯನ್ನು ನೇಮಿಸಲಾಗುವುದು’ ಎಂದರು.
‘ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಾರ್ಯನಿರ್ವಹಣೆ ಅಷ್ಟು ಸರಿ ಇಲ್ಲ. ಮಾರುಕಟ್ಟೆ ದರ, ಮಾರ್ಗಸೂಚಿ ದರಕ್ಕೂ ಅಧಿಕಾರಿಗಳು ಪ್ರಸ್ತಾಪಿಸುವ ದರಕ್ಕೂ ಯದ್ವಾತದ್ವಾ ವ್ಯತ್ಯಾಸ ಇರುತ್ತದೆ. ಹೀಗಾಗಿ, ಇವರನ್ನು ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವುದು ಉತ್ತಮ ಎನ್ನುವ ಅಭಿಪ್ರಾಯವನ್ನು ಸಚಿವರು ಮತ್ತು ಅಧಿಕಾರಿಗಳು ವ್ಯಕ್ತಪಡಿಸಿದಾಗ, ಈ ಬಗ್ಗೆ ಸುತ್ತೋಲೆ ಹೊರಡಿಸಲು ಮುಖ್ಯಮಂತ್ರಿ ಸೂಚಿಸಿದರು.
‘ಜಿಲ್ಲಾಧಿಕಾರಿಗಳು ಡೈರಿ ಬರೆಯುವಂತೆ ಕಳೆದ ವರ್ಷದ ಸಭೆಯಲ್ಲಿ ಮತ್ತು ಎಲ್ಲ ಕೆಡಿಪಿ ಸಭೆಗಳಲ್ಲಿ ಸೂಚನೆ ನೀಡಿದ್ದೆ. ಕೆಲವರು ಡೈರಿಗಳನ್ನು ಬರೆದಿಲ್ಲ ಎನ್ನುವ ಮಾಹಿತಿ ಇದೆ. ಆ ಡೈರಿ ಮುಖ್ಯ ಕಾರ್ಯದರ್ಶಿಗೆ ತಲುಪಬೇಕು’ ಎಂದು ನಿರ್ದೇಶನ ನೀಡಿದರು.
‘ಕುರಿಗಾಹಿಗಳಿಗೆ ಕುರಿಗಳ ಮತ್ತು ತಮ್ಮ ಜೀವದ ರಕ್ಷಣೆಗೆ ಬಂದೂಕು ಪರವಾನಗಿ ಕೊಡಬೇಕೆಂಬ ಸೂಚನೆ ಕೆಲವು ಕಡೆ ಇನ್ನೂ ಜಾರಿಗೆ ಬಂದಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದಾಗ, ‘ಈ ಕಾರ್ಯದ ಬಗ್ಗೆ ನಿಗಾ ವಹಿಸಲು ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು’ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು.
ಡಿಸಿ, ಸಿಇಒ, ಎಸ್‌ಪಿ ಪ್ರತಿಷ್ಠೆ ಬಿಟ್ಟು ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತೆ ಕೆಲಸ ಮಾಡಬೇಕು. ಸಮನ್ವಯ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯಸಿದ್ದರಾಮಯ್ಯ, ಮುಖ್ಯಮಂತ್ರಿ
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಬೇಕು. ನೋಟಿಸ್‌ಗೆ ಸಮರ್ಪಕ ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು. ‘ಫಲಿತಾಂಶ ಕಡಿಮೆ ಬರಲು ಶಿಕ್ಷಕರ ಕೊರತೆ ಸಿಬ್ಬಂದಿ ಕೊರತೆ ಎನ್ನುವ ನೆಪ ಹೇಳಬೇಡಿ. ಡಿಡಿಪಿಐಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಡಿಡಿಪಿಐಗಳು ತಮ್ಮ ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು. ಸಿಇಒಗಳು ಕಡ್ಡಾಯವಾಗಿ ನಿಗಾ ವಹಿಸಬೇಕು’ ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಸಿಎಸ್‌ಆರ್ ಶಾಲೆಗಳ ನಿರ್ಮಾಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರತಿವರ್ಷ ₹ 8 ಸಾವಿರ ಕೋಟಿ ಸಿಎಸ್‌ಆರ್ ನಿಧಿ ಲಭ್ಯವಿದೆ. ಇದನ್ನು ಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ, ರಾಜ್ಯದ ಕಾರ್ಪೊರೇಟ್ ಸಂಸ್ಥೆಗಳು ಈ ನಿಧಿಯನ್ನು ಅನ್ಯ ರಾಜ್ಯಗಳ ಸರ್ಕಾರೇತರ ಸಂಸ್ಥೆಗಳಿಗೆ ಚೆಕ್‌ನಲ್ಲಿ ಕೊಟ್ಟು, ಅದರಲ್ಲಿ ಶೇ 50ರಷ್ಟನ್ನು ನಗದು ರೂಪದಲ್ಲಿ ವಾಪಸ್ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದೊಂದು ಅಕ್ರಮ’ ಎಂದರು.
‘ಕಾರ್ಪೊರೇಟ್ ಸಂಸ್ಥೆಗಳು ಸಿಎಸ್‌ಆರ್ ನಿಧಿಯನ್ನು ನಗದು ಸ್ವರೂಪದಲ್ಲಿ ಕೊಡುವ ಬದಲು ಪಬ್ಲಿಕ್ ಶಾಲೆ ಕಟ್ಟಿಕೊಡಲಿ. ಆ ಶಾಲಾ ಕಟ್ಟಡದ ಮೇಲೆ ಆಯಾ ಸಂಸ್ಥೆಗಳ ಹೆಸರಿನ ಫಲಕ ಹಾಕಿಕೊಳ್ಳಲಿ’ ಎಂದರು.
ಸಭೆ ನಡೆಸಲು ಸೂಚನೆ: ‘ಕಾರ್ಪೊರೇಟ್ ಸಂಸ್ಥೆಗಳಿಗೆ ಕೂಡಲೇ ಪತ್ರ ಬರೆದು, ಸಭೆ ಕರೆದು ಪಬ್ಲಿಕ್ ಶಾಲೆಗಳ ನಿರ್ಮಾಣ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಬೇಕು’ ಎಂದು ಅವರು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.