
ಜಿ. ಪರಮೇಶ್ವರ
ಬೆಂಗಳೂರು: ‘ರಾಜ್ಯದಲ್ಲಿನ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪ್ರಭಾವಿಗಳೇ ಇದ್ದಾರೆ. ಅದರಲ್ಲೂ ರಾಯಚೂರು, ದೇವದುರ್ಗದಲ್ಲಿನ ಅಕ್ರಮಕ್ಕೆ ಯಾರು ಕಾರಣ ಎಂದು ನಾನು ಸದನದಲ್ಲಿ ಹೇಳುವುದಿಲ್ಲ. ಎಲ್ಲ ಪಕ್ಷದವರು ಅದಕ್ಕೆ ಬೆಂಬಲವಾಗಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
‘ನನ್ನ ಮೇಲೆ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾದರೆ ಧಮ್ಕಿ ಹಾಕುತ್ತಾರೆ’ ಎಂದು ವಿಧಾನಸಭೆಯಲ್ಲಿ ಜೆಡಿಎಸ್‌ನ ಕರೆಮ್ಮ ಜಿ. ನಾಯಕ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಕರೆಮ್ಮ ಅವರಿಗೆ ಅಕ್ರಮ ಮರಳು ಗಣಿಗಾರಿಕೆ ನಡೆಸುವವರಿಂದ ಬೆದರಿಕೆ ಬಂದಿರುವ ಕುರಿತು ತನಿಖೆ ನಡೆಸಿ, ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಯಾವುದೇ ಶಾಸಕರಿಗೂ ಸಮಸ್ಯೆಯಾಗಲು ನಾವು ಬಿಡುವುದಿಲ್ಲ. ಅವರಿಗೆ ರಕ್ಷಣೆ ನೀಡುವುದು ನಮ್ಮ ಪೊಲೀಸರ ಕರ್ತವ್ಯ. ದೇವದುರ್ಗ ಮಾತ್ರವಲ್ಲದೆ, ರಾಜ್ಯದ ಇತರ ಕಡೆಗಳಲ್ಲಿಯೂ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಎಲ್ಲೆಲ್ಲಿ ಮರಳು ದಂಧೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದರೆ ಪೊಲೀಸ್ ಇಲಾಖೆಗೆ ಕ್ರಮ ತೆಗೆದುಕೊಳ್ಳಲಿದೆ’ ಎಂದರು.
‘ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 440 ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ತಡೆಗೆ ರಾಯಚೂರು ಜಿಲ್ಲೆಯ ಶಾಸಕರ ಸಭೆ ನಡೆಸಿ, ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಅಕ್ರಮ ಮರಳು ದಂಧೆ ಸೇರಿದಂತೆ ಇನ್ನಿತರ ಅಕ್ರಮಗಳಲ್ಲಿ ತೊಡಗಿದ್ದವರಲ್ಲಿ 10 ಮಂದಿಯನ್ನು ರಾಯಚೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಇನ್ನೂ 18 ಪ್ರಕರಣಗಳ ಪರಿಶೀಲನೆ ಮಾಡಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳೊಂದಿಗೂ ಸಭೆ ನಡೆಸಲಾಗುತ್ತಿದ್ದು, ಬ್ಯಾಂಕ್ ಖಾತೆಗಳಿಗೆ ದೊಡ್ಡ ಮಟ್ಟದಲ್ಲಿ ಹಣ ಪಾವತಿಸುವವರ ವಿವರ ಪಡೆದು ಅವುಗಳನ್ನು ಪರಿಶೀಲಿಸುವ ಚಿಂತನೆ ನಡೆಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.