ADVERTISEMENT

ಮಾಹಿತಿ ತಂತ್ರಜ್ಞಾನ: ಪೋರ್ಟಲ್‌ ಪ್ರಶ್ನಿಸಿದ ಎಕ್ಸ್ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 15:33 IST
Last Updated 24 ಸೆಪ್ಟೆಂಬರ್ 2025, 15:33 IST

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ADVERTISEMENT

ಬೆಂಗಳೂರು: ‘ಮಾಹಿತಿ ಹಂಚಿಕೆಯನ್ನು ನಿರ್ಬಂಧಿಸುವ ದಿಸೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಜಾರಿಗೆ ತರಲಾಗಿರುವ ಸಹಯೋಗ್ ಪೋರ್ಟಲ್‌ ಕಾನೂನಿನ ವೈರುಧ್ಯಗಳಿಗೆ ಸಾಕ್ಷಿಯಾಗಿದೆ’ ಎಂದು ಆಕ್ಷೇಪಿಸಿ ‘ಎಕ್ಸ್‌’ ಕಾರ್ಪ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ದೇಶದಲ್ಲಿನ ಸಾಮಾಜಿಕ ಜಾಲಾತಾಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಕಲಂ 79(3) (ಬಿ) ಅಡಿಯಲ್ಲಿ ಸಹಯೋಗ್‌ ಪೋರ್ಟ್‌ಲ್‌  ಪ್ರಾರಂಭಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಎಕ್ಸ್​ ಕಾರ್ಪ್‌ನ ​(ಈ ಹಿಂದಿನ ಟ್ವಿಟರ್​) ಸ್ಥಳೀಯ ಪ್ರತಿನಿಧಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.

‘ಸಂವಿಧಾನದ 19ನೇ ವಿಧಿ ವಿಶಾಲವಾದ ಅರ್ಥವನ್ನು ಹೊಂದಿದೆ. ಇದರ ಅಡಿಯಲ್ಲಿ ಲಭ್ಯವಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ನಾಗರಿಕರಿಗೆ ಮಾತ್ರ ಲಭ್ಯವಾಗಿದೆ. ಆದರೆ, ಇದೇ ವಿಧಿಯ ಅಡಿಯಲ್ಲಿ ಒಂದು ಸಂಸ್ಥೆಯಾಗಿರುವ ಎಕ್ಸ್​ ಕಾರ್ಪ್​ಗೆ ಈ ಅಧಿಕಾರ ಲಭ್ಯವಾಗುವುದಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿದೆ.

‘ಈ ಅರ್ಜಿದಾರರ ಮೂಲ ಸ್ಥಾನ ಅಮೆರಿಕ. ಅಮೆರಿಕದಲ್ಲಿ ಸಾಮಾಜಿಕ ಜಾಲಾತಾಣಗಳನ್ನು ನಿಯಂತ್ರಿಸಲಾಗುತ್ತಿದೆ. ಅಲ್ಲದೆ, ಪ್ರತಿಯೊಂದು ಸಾರ್ವಭೌಮ ರಾಷ್ಟ್ರಗಳೂ ಸಾಮಾಜಿಕ ಜಾಲಾತಾಣಗಳನ್ನು ನಿಯಂತ್ರಿಸುತ್ತಿವೆ. ನಿಯಂತ್ರಣವಿಲ್ಲದ ವಾಕ್​ ಸ್ವಾತಂತ್ರ್ಯವು ಕಾನೂನು ಬಾಹಿರತೆಗೆ ದಾರಿ ಮಾಡಿಕೊಡಲಿದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

‘ಪ್ರಸಕ್ತ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳು ಅಖಾಡದಂತಿದ್ದು ಇವುಗಳು ಅರಾಜಕತಾ ವಾದ ಬಿತ್ತುವುದಕ್ಕೆ ಸ್ವಾತಂತ್ರ್ಯ ನೀಡಲಾಗದು. ಈ ಕ್ಷೇತ್ರವನ್ನು ನಿಯಂತ್ರಣ ಮಾಡುವುದು ಹೊಸದೂ ಅಲ್ಲ, ವಿಶಿಷ್ಟವೂ ಅಲ್ಲ. ನಮ್ಮ ರಾಷ್ಟ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಬಯಸುವ ಪ್ರತಿಯೊಂದು ವೇದಿಕೆಯೂ ತನಗಿರುವ ಸ್ವಾತಂತ್ರ್ಯವನ್ನು ಜವಾಬ್ದಾರಿಯೊಂದಿಗೆ ನಿಭಾಯಿಸಬೇಕು ಮತ್ತು ದೇಶದಲ್ಲಿ ಕಾರ್ಯನಿರ್ವಹಣೆಗೆ ಅಧಿಕಾರ ಪಡೆದಲ್ಲಿ ಹೊಣೆಗಾರಿಕೆಯನ್ನು ಅನುಸರಿಸುವುದು ಗಂಭೀರ ಕರ್ತವ್ಯ ಎಂಬುದನ್ನು ಒಪ್ಪಿಕೊಳ್ಳಬೇಕು’ ಎಂದು ನ್ಯಾಯಪೀಠ ಹೇಳಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪರ ವಾದ ಮಂಡಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಸಹಯೋಗ್‌ ಪೋರ್ಟಲ್‌ ಅನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಸ್ಥಾಪಿಸಲಾಗಿದೆ. ಇದರಿಂದ ಎಲ್ಲಾ ಆನ್‌ಲೈನ್‌ ಮಧ್ಯಸ್ಥಿಕೆ ಸಂಸ್ಥೆಗಳು ತಮ್ಮ ವೇದಿಕೆಗಳಲ್ಲಿ ಯಾವುದೇ ಕಾನೂನು ಬಾಹಿರ ವಿಷಯದ ಕುರಿತು ಅಧಿಕೃತ ಅಧಿಕಾರಿಗಳಿಂದ ಬರುವ ಸೂಚನೆಗಳ ಮೇಲೆ ಸುಲಭವಾಗಿ ನಿಗಾ ಇಡಬಹುದು’ ಎಂದು ಪ್ರತಿಪಾದಿಸಿದ್ದರು.

‘ಸಾಮಾಜಿಕ ಮಾಧ್ಯಮಗಳಲ್ಲಿ ಅನಾಮಧೇಯರ ಅಪಾಯಗಳು ಮತ್ತು ಸಂಪಾದಕೀಯ ಬಳಗದ ಹೊಣೆಗಾರಿಕೆಯ ಕೊರತೆ ಇದೆ. ಈ ವೇದಿಕೆಗಳಲ್ಲಿ ನಕಲಿ ಖಾತೆ ಸೃಷ್ಟಿಸುವುದು ಸುಲಭವಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ಏನಿದು ಪ್ರಕರಣ?

‘ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪೊಲೀಸರನ್ನೂ ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಕಲಂ 69ಎ ಬದಲಿಗೆ ಕಲಂ 79(3)(ಬಿ) ಅಡಿ ಮಾಹಿತಿ ನಿರ್ಬಂಧಿಸಲು ನಿರ್ದೇಶಿಸಿದೆ. ನಿರ್ಬಂಧ ಆದೇಶ ಮಾಡಲು ಸಿದ್ಧ ಮಾದರಿಯನ್ನೂ ನೀಡಿದೆ. ಇದು ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆಯಾಗಲಿದೆ. ಅಲ್ಲದೆ, ಕಲಂ 79(3)(ಬಿ) ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ನಿರ್ಬಂಧ ಆದೇಶ ಮಾಡಲು ಅನುಮತಿಸುವ ಕೇಂದ್ರ ಗೃಹ ಇಲಾಖೆ ರೂಪಿಸಿರುವ ಸಹಯೋಗ್‌ ಪೋರ್ಟಲ್‌ ಪರಿಚಯಿಸಿರುವ ಕಾನೂನು ಬಾಹಿರ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಈ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಮಾಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಮಾಹಿತಿ ಮತ್ತು ಸಂಹವನವು ನಿಯಂತ್ರಣಕ್ಕೆ ಒಳಪಟ್ಟಿದ್ದು, ಮಾಹಿತಿದಾರರಿಂದ ಅಂಚೆ ಕಾಲದವರಿಗೆ, ಈಗಿನ ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ ಚಾಟ್‌ ಎಲ್ಲವೂ ಸ್ಥಳೀಯ ಮತ್ತು ಜಾಗತಿಕವಾಗಿ ನಿಯಂತ್ರಣಕ್ಕೆ ಒಳಪಟ್ಟಿವೆ.
ನ್ಯಾ. ಎಂ.ನಾಗಪ್ರಸನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.