ADVERTISEMENT

ಎಸ್‌ಎಂಎಸ್‌, ಫೋನ್‌ ಕರೆ ಮೂಲಕ ವಾಸ್ತವ್ಯದ ಮಾಹಿತಿ

ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಮುಂಚೆಯೇ ಸಿಗಲಿದೆ ಸಮಗ್ರ ವಿವರ

ಮನೋಜ ಕುಮಾರ್ ಗುದ್ದಿ
Published 10 ಜನವರಿ 2020, 5:09 IST
Last Updated 10 ಜನವರಿ 2020, 5:09 IST
ಸಮ್ಮೇಳನದ ಲಾಂಛನ
ಸಮ್ಮೇಳನದ ಲಾಂಛನ   

ಕಲಬುರ್ಗಿ: ಫೆಬ್ರುವರಿ 5ರಿಂದ 7ರವರೆಗೆ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿರುವ ನೋಂದಾಯಿತ ಪ್ರತಿನಿಧಿಗಳಿಗೆ ‘ಹಿತಾನುಭವ’ ನೀಡಲು ಸಮ್ಮೇಳನದ ಸಂಘಟಕರು ಮುಂದಾಗಿದ್ದಾರೆ.

ಬಸ್‌ ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ಇಳಿದು ತಮ್ಮ ವಾಸ್ತವ್ಯ ವ್ಯವಸ್ಥೆ ಎಲ್ಲಿ ಆಗಿದೆ ಎಂದು ಪ್ರತಿನಿಧಿಗಳು ಹುಡುಕಾಡುವ ಸಮಸ್ಯೆಗೆ ಪೂರ್ಣವಿರಾಮ ಹಾಕಲಿರುವ ವಸತಿ ಸಮಿತಿ ಹಾಗೂ ಸಾರಿಗೆ ಸಮಿತಿಯವರು, ಮುಂಚೆಯೇ ಪ್ರತಿನಿಧಿಗಳ ಮೊಬೈಲ್‌ಗಳಿಗೆ ಎಸ್‌ಎಂಎಸ್‌ ಮೂಲಕ ಉಳಿದುಕೊಳ್ಳಬೇಕಾದ ಸ್ಥಳದ ಮಾಹಿತಿ ನೀಡಲಿದ್ದಾರೆ. ಇದಕ್ಕೆ ಪೂರಕವಾಗಿ ಸಾರಿಗೆ ಸಮಿತಿಯವರು ಪ್ರತಿನಿಧಿಗಳನ್ನು ವಾಸ್ತವ್ಯ ಸ್ಥಳಕ್ಕೆ ಕರೆದೊಯ್ಯುವರು. ಅಲ್ಲಿಂದ ಸಮ್ಮೇಳನ ನಡೆಯಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣಕ್ಕೂ ಸಾರಿಗೆ ಸೇವೆ ಕಲ್ಪಿಸಲಾಗುತ್ತಿದೆ.

ಇದಕ್ಕಾಗಿಯೇ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಬ್ಬೊಬ್ಬ ಅಧಿಕಾರಿಗೆ ಒಂದೊಂದು ವಾಸ್ತವ್ಯ ಸ್ಥಳದ ಉಸ್ತುವಾರಿ ವಹಿಸಲಾಗುತ್ತಿದೆ. ಸಮ್ಮೇಳನದ ಹಿಂದಿನ ದಿನ ಸಂಜೆಯಿಂದಲೇಕೇಂದ್ರ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಸ್ವಾಗತ ಕೇಂದ್ರವನ್ನು ತೆರೆಯಲಾಗಿರುತ್ತದೆ. ಅಲ್ಲಿ ವಸತಿ ಹಾಗೂ ಸಾರಿಗೆ ಸಮಿತಿ ಸಿಬ್ಬಂದಿ ಇರುತ್ತಾರೆ. ಅಲ್ಲಿಯೂ ಎಲ್ಲ ಮಾಹಿತಿ ದೊರೆಯಲಿದೆ. ಇದರಿಂದಾಗಿ ಕೊನೆ ಕ್ಷಣದ ಧಾವಂತ ಹಾಗೂ ಗೊಂದಲಗಳನ್ನು ತಕ್ಕಮಟ್ಟಿಗೆ ಪರಿಹರಿಸಬಹುದು ಎಂಬುದು ಸಮ್ಮೇಳನದ ವಸತಿ ಹಾಗೂ ಸಾರಿಗೆ ಸಮಿತಿಯ ಆಶಯ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ವಸತಿ ಹಾಗೂ ಸಾರಿಗೆ ಸಮಿತಿಗಳ ಕಾರ್ಯಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜಾ ಪಿ, ‘ಜನವರಿ 14ರವರೆಗೆ ನೋಂದಣಿ ಮಾಡಿಸಲು ಅವಕಾಶವಿದೆ. ಆ ಬಳಿಕ ಸಮ್ಮೇಳನಕ್ಕೆ ಬರಲಿರುವ ಒಟ್ಟು ಪ್ರತಿನಿಧಿಗಳ ಸಂಖ್ಯೆ ನಮಗೆ ನಿಖರವಾಗಿ ದೊರೆಯಲಿದೆ. ಎಲ್ಲ ಪ್ರತಿನಿಧಿಗಳ ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸಿ ಅವರೊಂದಿಗೆ ಸಂಪರ್ಕ ಸಾಧಿಸಲಾಗುವುದು. ಇದಕ್ಕಾಗಿಯೇ ಪ್ರತಿನಿಧಿಗಳು ವಾಸ್ತವ್ಯ ಹೂಡುವ ಸ್ಥಳಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಅವರಿಗೆ ಸಹಾಯ ಮಾಡಲು ಸ್ವಯಂ ಸೇವಕರ ಪಡೆ ಸಿದ್ಧಗೊಳಿಸಲಾಗುತ್ತದೆ’ ಎಂದರು.

ಪರಿಷ್ಕೃತ ಲಾಂಛನ ಬಿಡುಗಡೆ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿದ್ದ ತಪ್ಪುಗಳನ್ನು ಸರಿಪಡಿಸಿ ಪರಿಷ್ಕತ ಲಾಂಛನಬಿಡುಗಡೆ ಮಾಡಲಾಗಿದೆ.

ಲಾಂಛನದಲ್ಲಿ ಸಾಂದರ್ಭಿಕವಾಗಿ ಕವಿರಾಜ ಮಾರ್ಗ ಕೃತಿ ಚಿತ್ರಿಸಿದ್ದು, ಈ ಕೈ ಉಲ್ಟಾ ಬರೆಯುವ ರೀತಿ ಚಿತ್ರಸಲಾಗಿತ್ತು.ಈ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಈ ತಪ್ಪು ಸರಿಪಡಿಸಲಾಗಿದೆ.

***

ಸಮ್ಮೇಳನದ ಸಂದರ್ಭದಲ್ಲಿ ಪ್ರತಿನಿಧಿಗಳಿಗೆ ವಸತಿ ಸೌಲಭ್ಯಕ್ಕಾಗಿ ನಗರದ ವಸತಿ ಗೃಹಗಳು, ಕಲ್ಯಾಣ ಮಂಟಪಗಳು, ಶಾಲಾ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತದೆ. 350 ವಾಹನಗಳನ್ನು ಕಾಯ್ದಿರಿಸಲಾಗಿದೆ. 20 ವಾಹನಗಳು ನಗರದಿಂದ ಸಮ್ಮೇಳನ ಸ್ಥಳಕ್ಕೆ ನಿರಂತರವಾಗಿ ಸಂಚರಿಸಲಿವೆ
-ಡಾ. ಪಿ.ರಾಜಾ, ವಸತಿ ಹಾಗೂ ಸಾರಿಗೆ ಸಮಿತಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.