
ಬೆಳಗಾವಿಯ ಸುವರ್ಣ ವಿಧಾನಸೌಧ
ಸುವರ್ಣ ವಿಧಾನಸೌಧ (ಬೆಳಗಾವಿ): ಸ್ನಾತಕ, ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ವೃತ್ತಿಶಿಕ್ಷಣ ವಿದ್ಯಾರ್ಥಿಗಳಲ್ಲಿ ನವೋದ್ಯಮ, ನಾವೀನ್ಯತೆ ಹಾಗೂ ಸ್ಟಾರ್ಟ್‌ಅಪ್ ಕುರಿತು ಉತ್ತೇಜಿಸಲು ‘ಇನ್ನೋ ಮಂಥನ್’ ಹೆಸರಿನ ವ್ಯಾಪಾರ ಯೋಜನಾ ಪ್ರಸ್ತುತಿ ಸ್ಪರ್ಧಾ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ.
ಈ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷೆ ಉಮಾ ರೆಡ್ಡಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತೆ ಕೆ.ಎನ್. ಮಂಜುಶ್ರೀ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಕಾರ್ಯಕ್ರಮದ ಪ್ರಮುಖ ಧ್ಯೇಯ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಸ್ವಾವಲಂಬಿ ಜೀವನಕ್ಕಾಗಿ ನವೋದ್ಯಮದ ಪಥವನ್ನು ಅನುಸರಿಸುವಂತೆ ಸಬಲೀಕರಣಗೊಳಿಸುವುದು, ಭವಿಷ್ಯದ ಉದ್ಯಮ ಸೃಷ್ಟಿಕರ್ತರು ಹಾಗೂ ವ್ಯಾಪಾರ ನಾಯಕರಾಗಿ ರೂಪಿಸಲು ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ₹73.20 ಲಕ್ಷ ಅನುದಾನ ಒದಗಿಸುತ್ತಿದೆ.
‘ವಿದ್ಯಾರ್ಥಿ ತಂಡಗಳ ಪಟ್ಟಿಯನ್ನು ಜುಲೈನಲ್ಲಿ ಪ್ರಕಟಿಸಲಾಗುವುದು. ಅಂತಿಮವಾಗಿ ಆಯ್ಕೆಯಾದ ತಂಡಗಳಿಗೆ ತೀರ್ಪುಗಾರರು ಹಾಗೂ ಹಿರಿಯ ಕೈಗಾರಿಕೋದ್ಯಮಿಗಳ ಸಮ್ಮುಖದಲ್ಲಿ ತಮ್ಮ ವ್ಯಾಪಾರ ಯೋಜನೆಗಳನ್ನು ಪ್ರಸ್ತುತಪಡಿಸುವ ಅವಕಾಶ ನೀಡಲಾಗುವುದು. ಪ್ರಶಸ್ತಿ ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು’ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.