ADVERTISEMENT

ಕಲ್ಲು ಗಣಿಗಾರಿಕೆ: ಹೆಸರಿಗೆ ಸಕ್ರಮ, ಒಳಗಡೆ ಅಕ್ರಮ!

‘ನಿಗದಿತ ಏಜೆನ್ಸಿ ಮೂಲಕ ಪರಿಣತರಿಂದಲೇ ‘ಸ್ಫೋಟ’ ನಡೆಸಬೇಕು ಎಂಬ ನಿಯಮ ಉಲ್ಲಂಘನೆ’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 19:40 IST
Last Updated 25 ಫೆಬ್ರುವರಿ 2021, 19:40 IST
ಕೋಲಾರ ತಾಲ್ಲೂಕಿನ ಬೆಟ್ಟಹೊಸಪುರ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ನೋಟ
ಕೋಲಾರ ತಾಲ್ಲೂಕಿನ ಬೆಟ್ಟಹೊಸಪುರ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ನೋಟ   

ಬೆಂಗಳೂರು: ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣದ ಸಂದರ್ಭದಲ್ಲಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದಾಗಿ ಸರ್ಕಾರ ನೀಡಿದ್ದ ಭರವಸೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಸ್ಫೋಟದ ಮೂಲಕ ಸುಳ್ಳಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂದಾಯ, ಸರ್ಕಾರಿ ಜಮೀನು, ಗೋಮಾಳ, ಪಟ್ಟಾ ಜಮೀನು ಸೇರಿದಂತೆ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದಿರುವ ಗಣಿ ಗುತ್ತಿಗೆದಾರರ ಅಕ್ರಮ ನಿಂತಿಲ್ಲ. ಪೊಲೀಸರು ಪ್ರತಿನಿತ್ಯ ಡಿಟೋನೇಟರ್‌, ಜಿಲೆಟಿನ್‌ಗಳನ್ನು ಜಪ್ತಿ ಮಾಡುತ್ತಿರುವುದು ಇದನ್ನು ಪುಷ್ಟೀಕರಿಸಿದೆ.

ಸಂಜೆ 5ರ ನಂತರವಷ್ಟೇ ಕ್ವಾರಿಗಳಲ್ಲಿ ಸ್ಫೋಟ ನಡೆಸಬೇಕು. ದಿನಕ್ಕೆ ಐದಾರು ಗಂಟೆ ಮಾತ್ರ ಈ ಕಾರ್ಯ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಹಲವು ಕಡೆಗಳಲ್ಲಿ ಹಗಲು ಹೊತ್ತಿನಲ್ಲೇ ಸ್ಫೋಟಕ ಬಳಸಿ ಬಂಡೆ ಸಿಡಿಸಲಾಗುತ್ತಿದೆ. ನಿಗದಿತ ಏಜೆನ್ಸಿ ಮೂಲಕ, ಪರಿಣತರಿಂದಲೇ ‘ಸ್ಫೋಟ’ ನಡೆಸಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ ಎಂಬುದು ಸಂತ್ರಸ್ತ ಗ್ರಾಮಸ್ಥರ ದೂರು.

ADVERTISEMENT

ನಿಲ್ಲದ ಅಕ್ರಮ: ಹುಣಸೋಡು ಘಟನೆ ಬಳಿಕ ಮುನ್ನೆಚ್ಚರಿಕೆ ವಹಿಸುವಂತೆ ದಾವಣಗೆರೆ ಜಿಲ್ಲೆಯ ಕ್ರಷರ್ ಮತ್ತು ಕ್ವಾರಿ ಮಾಲೀಕರಿಗೆ ಸೂಚಿಸಲಾಗಿತ್ತು. ದಾವಣಗೆರೆ ತಾಲ್ಲೂಕಿನ ಆಲೂರಿನಲ್ಲಿ ಒಂದು ಡಿಟೊನೇಟರ್ ಪತ್ತೆಯಾಗಿದ್ದು, ಪ್ರಕರಣ ದಾಖಲಾಗಿದೆ.

ಕಲಬುರ್ಗಿ ಜಿಲ್ಲೆಯ ಬೀದರ್ ತಾಲ್ಲೂಕಿನ ಸುಲ್ತಾನಪುರ ಬಳಿ ತೆಲಂಗಾಣ ಗಡಿಯಲ್ಲಿ ಪೊಲೀಸರು ದಾಳಿ ನಡೆಸಿ 16 ಕ್ವಿಂಟಲ್‌ ಜಿಲೆಟಿನ್‌ ಜಪ್ತಿ ಮಾಡಿದ್ದಾರೆ. ಅಕ್ರಮ ಚಟುವಟಿಕೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

ಮೂರು ಏಜೆನ್ಸಿಗಳಿಗಷ್ಟೇ ಸ್ಫೋಟದ ಅನುಮತಿ: ರಾಮನಗರ ಜಿಲ್ಲೆಯಲ್ಲಿ ಕೇವಲ ಮೂರು ಏಜೆನ್ಸಿಗಳಷ್ಟೇ ಸ್ಫೋಟಕ್ಕೆ ಅನುಮತಿ ಪಡೆದಿವೆ. ಈ ಏಜೆನ್ಸಿಗಳ ಮೂಲಕವೇ ಎಲ್ಲ ಕ್ವಾರಿಗಳಲ್ಲಿ ಸ್ಫೋಟ ನಡೆಸಬೇಕಿದೆ. ಆದರೆ, ಗಣಿ ಮಾಲೀಕರು ಈ ಕಾರ್ಯಕ್ಕೆ ಪರಿಣತರಲ್ಲದ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೊರರಾಜ್ಯಗಳ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಆಗಾಗ್ಗೆ ಅವಘಡ ನಡೆಯುತ್ತವೆಯಾದರೂ ಬೆಳಕಿಗೆ ಬರುವುದು ಕಡಿಮೆ. ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಮಿಕರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿ ಮುಚ್ಚಿಹಾಕಲಾಗುತ್ತಿದೆ ಎಂದು ಗಣಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಹೇಳುತ್ತಾರೆ.

ಅಕ್ರಮ ಗಣಿಗಾರಿಕೆಯಿಂದ ಕೃಷಿಗೆ ಆಪತ್ತು

ಅಕ್ರಮ ಗಣಿಗಾರಿಕೆಯು ಕೃಷಿ ಚಟುವಟಿಕೆಗೂ ಕಂಟಕ ತಂದೊಡ್ಡಿದೆ. ಇದಕ್ಕೆ ಕೋಲಾರ ತಾಲ್ಲೂಕಿನ ಅಂಧ್ರಹಳ್ಳಿ, ಬೆಟ್ಟಹೊಸಪುರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಿದರ್ಶನವಾಗಿದೆ.

ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಗಣಿಗಾರಿಕೆಯ ದೂಳಿನಿಂದ ಸುತ್ತಮುತ್ತಲಿನ ಚೊಕ್ಕಪುರ, ಸೂಲೂರು, ಹೊರಕೆರೆ, ಪೆಮ್ಮಚಟ್ನಹಳ್ಳಿ, ಧನಮಟ್ನಹಳ್ಳಿಯ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿವೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಮಂಟಿ ಬಿಳಗೂಲಿ ಗ್ರಾಮದ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ರಾಜಕಾರಣಿಯೊಬ್ಬರು ಈ ಭಾಗದ ಸೀತೆಬೆಟ್ಟದಲ್ಲಿ ಕ್ರಷರ್‌ ನಡೆಸುತ್ತಿದ್ದು, ಗ್ರಾಮದಲ್ಲಿ ಮನೆಗಳು ಮನೆಗಳು ಬಿರುಕು ಬಿಟ್ಟಿವೆ. ತುಮಕೂರು ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಕಡೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ ನಿಯಂತ್ರಣ ಸಾಧ್ಯವಾಗಿಲ್ಲ. ಸ್ಫೋಟಕ ಬಳಸುತ್ತಿರುವುದರಿಂದ ಮನೆಗಳು ಬಿರುಕು ಬಿಡುವುದು ಸಾಮಾನ್ಯವಾಗಿದೆ.

ಹೊಸಪೇಟೆ: ನದಿ ಪಥಕ್ಕೆ ಅಪಾಯ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಬಳಿ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಇಡೀ ನದಿ ಮಾರ್ಗವೇ ಬದಲಾಗುವ ಆತಂಕ ಪರಿಸರ ಪ್ರೇಮಿಗಳದ್ದು. ಈ ಸಂಬಂಧ ಅವರು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಫಲಶ್ರುತಿ ಶೂನ್ಯ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಕಾವತಿ ನದಿ ಪಾತ್ರದ ವ್ಯಾಪ್ತಿ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಪರವಾನಗಿ ನೀಡಲು ಅವಕಾಶವಿಲ್ಲ ಎಂಬುದು ಸರ್ಕಾರದ ನಿಯಮ. ಆದರೆ, ಇದನ್ನು ಗಾಳಿಗೆ ತೂರಲಾಗಿದೆ.

ಮಂಗಳೂರು ಹೊರವಲಯದ ಮಳವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ‌ಗುಂಡವಪದವು ಕೊರಗರ ಕಾಲೊನಿಯಲ್ಲಿ ನಿಯಮ ಉಲ್ಲಂಘಿಸಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.