ADVERTISEMENT

ಇನ್‌ಸ್ಪೆಕ್ಟರ್‌ಗೆ ಸಿ.ಎಂ ಚಿನ್ನದ ಪದಕದ ‘ಗರಿ’: ‘ಲೋಕಾ’ಕ್ಕೆ ಹೆದರಿ ಪರಾರಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 23:48 IST
Last Updated 2 ಏಪ್ರಿಲ್ 2025, 23:48 IST
ಪಿಎಸ್‌ಐ ಎ.ವಿ.ಕುಮಾರ್‌
ಪಿಎಸ್‌ಐ ಎ.ವಿ.ಕುಮಾರ್‌   

ಬೆಂಗಳೂರು: ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಪಾತ್ರರಾಗಿದ್ದ ಇನ್‌ಸ್ಪೆಕ್ಟರ್‌ ಎ.ವಿ. ಕುಮಾರ್ ಅವರು ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಎ.ವಿ.ಕುಮಾರ್‌, ಈ ಸಾಲಿನ ಮುಖ್ಯಮಂತ್ರಿಯ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದರು. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಪದಕ ಸ್ವೀಕರಿಸಬೇಕಿತ್ತು. ಆದರೆ, ಕುಮಾರ್‌ ವಿರುದ್ಧ ದಾಖಲಾಗಿದ್ದ ದೂರಿನ ಸಂಬಂಧ ಲೋಕಾಯುಕ್ತ ಪೊಲೀಸರು ಮಂಗಳವಾರ ರಾತ್ರಿ, ಅವರ ಮನೆಯ ಮೇಲೆ ದಾಳಿಗೆ ಮುಂದಾಗಿದ್ದರು.

‘ಸಿವಿಲ್‌ ಗುತ್ತಿಗೆದಾರ ಚನ್ನೇಗೌಡ ಮತ್ತು ಅವರ ಪತ್ನಿ ಅನುಷಾ ವಿರುದ್ಧ ಸೋಮಶೇಖರ್ ಆರಾಧ್ಯ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ 2024ರ ಜನವರಿಯಲ್ಲಿ ದೂರು ದಾಖಲಿಸಿದ್ದರು. ಈ ಇಬ್ಬರೂ ತಮ್ಮ ವಸತಿ ಕಟ್ಟಡವನ್ನು ಭೋಗ್ಯಕ್ಕೆ ನೀಡುತ್ತೇವೆಂದು ₹60 ಲಕ್ಷ ಪಡೆದುಕೊಂಡಿದ್ದರು. ಆದರೆ ಮನೆಯನ್ನೂ ನೀಡದೆ, ಹಣವನ್ನೂ ಪೂರ್ತಿ ಹಿಂದಿರುಗಿಸದೆ ವಂಚಿಸಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದು ಅವರ ವಿರುದ್ಧದ ಆರೋಪವಾಗಿತ್ತು’ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ADVERTISEMENT

‘ಅನುಷಾ ಅವರು ಸರ್ಕಾರಿ ನೌಕರಿಯಲ್ಲಿದ್ದು, ಪ್ರಕರಣ ಮುಂದುವರಿದರೆ ನೌಕರಿಗೆ ತೊಂದರೆಯಾಗುತ್ತದೆ ಎಂದು ಪಿಎಸ್‌ಐ ಕುಮಾರ್ ಅವರು ಚನ್ನೇಗೌಡಗೆ ತಿಳಿಸಿದ್ದರು. ಜತೆಗೆ ದೂರುದಾರರ ಜತೆ ರಾಜಿ ಮಾಡಿಕೊಂಡರೆ ಪ್ರಕರಣ ಮುಗಿಸಬಹುದು. ಇದಕ್ಕಾಗಿ ಮನೆಯನ್ನು ತಾವು ಹೇಳಿದವರಿಗೆ ಬರೆದುಕೊಡಿ ಎಂದು ಕುಮಾರ್‌ ಬೇಡಿಕೆ ಇಟ್ಟಿದ್ದರು’ ಎಂದು ಮೂಲಗಳು ವಿವರಿಸಿವೆ.

‘ಈ ಸಂಬಂಧ ಕುಮಾರ್‌ ಹಲವು ಬಾರಿ ಕರೆ ಮಾಡಿ ಒತ್ತಡ ಹೇರಿದರು. ₹4 ಕೋಟಿ ಮೌಲ್ಯದ ಕಟ್ಟಡವನ್ನು ಕೇವಲ ₹60 ಲಕ್ಷಕ್ಕೆ ಕೇಳಿದರು. ಮನೆ ನೋಡಿಕೊಂಡು ಬರಲು ತಮ್ಮ ಅಧೀನ ಸಿಬ್ಬಂದಿ ಮತ್ತು ಸಂಬಂಧಿಗಳನ್ನೂ ಕಳುಹಿಸಿದ್ದರು. ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದರು ಎಂದು ಚನ್ನೇಗೌಡ ಮತ್ತು ಅನುಷಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಜತೆಗೆ ಕರೆಯ ಆಡಿಯೊವನ್ನೂ ಸಲ್ಲಿಸಿದ್ದರು’ ಎಂದು ಮಾಹಿತಿ ನೀಡಿವೆ.

‘ಕಟ್ಟಡದ ಮಾಲೀಕತ್ವವನ್ನು ತಮ್ಮವರಿಗೆ ವರ್ಗಾಯಿಸಿಕೊಳ್ಳುವುದರ ಸಂಬಂಧ ಕುಮಾರ್‌ ಅವರು ಮಂಗಳವಾರ ರಾತ್ರಿ ಸಭೆ ನಿಗದಿ ಮಾಡಿದ್ದರು. ಅದರಂತೆ ಚನ್ನೇಗೌಡ ನಾಗರಬಾವಿಯ ಹೋಟೆಲ್‌ ಒಂದಕ್ಕೆ ಬಂದಿದ್ದರು. ಕುಮಾರ್ ಪರವಾಗಿ ಅವರ ಸಂಬಂಧಿಗಳು ಮತ್ತು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಉಮೇಶ್, ಕಾನ್‌ಸ್ಟೆಬಲ್‌ ಅನಂತ್ ಸಹ ಹೋಟೆಲ್‌ಗೆ ಬಂದಿದ್ದರು. ಇದೇ ವೇಳೆ ದಾಳಿ ನಡೆಸಿ, ಪೊಲೀಸ್‌ ಸಿಬ್ಬಂದಿ ಸೇರಿ ಐವರನ್ನು ವಶಕ್ಕೆ ಪಡೆಯಲಾಯಿತು’ ಎಂದು ಮೂಲಗಳು ತಿಳಿಸಿವೆ.

‘ಏಕಕಾಲದಲ್ಲಿ ಹೋಟೆಲ್‌ ಮತ್ತು ಕುಮಾರ್ ಅವರ ಮನೆಯಲ್ಲಿ ಶೋಧ ನಡೆಸಲಾಯಿತು. ಆದರೆ ಹೋಟೆಲ್‌ಗೆ ಹೊರಟಿದ್ದ ಕುಮಾರ್‌, ಇಲಾಖೆಯ ಅಧಿಕೃತ ಜೀಪನ್ನು ಮನೆಯ ಸಮೀಪದ ರಸ್ತೆಯಲ್ಲೇ ಬಿಟ್ಟು ಓಡಿಹೋದರು. ಅವರ ಬಂಧನಕ್ಕೆ ಕಾರ್ಯಾಚರಣೆ ರೂಪಿಸಿದ್ದು, ತಂಡ ರಚಿಸಲಾಗಿದೆ’ ಎಂದು ತಿಳಿಸಿವೆ.

ತನಿಖೆ ನಡೆಸುತ್ತೇವೆ: ಗೃಹ ಸಚಿವ

ಇನ್‌ಸ್ಪೆಕ್ಟರ್‌ ಕುಮಾರ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು ಎಂಬುದರ ಮಾಹಿತಿ ಸಿಕ್ಕಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಪೊಲೀಸರಿಗೆ ಪದಕ ಪ್ರದಾನ ಕಾರ್ಯಕ್ರಮದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ದೂರು ಮತ್ತು ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದ್ದಾರೆ. ರಿಯಲ್‌ ಎಸ್ಟೇಟ್‌ ವ್ಯವಹಾರ: ಪೊಲೀಸ್‌ ಠಾಣೆಗೆ ಬರುವ ರಿಯಲ್‌ ಎಸ್ಟೇಟ್‌ ವ್ಯಾಜ್ಯ–ಗಲಾಟೆಯನ್ನು ಪರಿಹರಿಸಿ ಪ್ರತಿಯಾಗಿ ಹಣ ಅಥವಾ ನಿವೇಶನ ಪಡೆಯುವ ವ್ಯವಹಾರವನ್ನು ಕುಮಾರ್‌ ನಡೆಸುತ್ತಿದ್ದರು ಎಂಬುದು ಗೊತ್ತಾಗಿದೆ. ಕುಮಾರ್ ಕುಟುಂಬದವರು ಮತ್ತು ಸಂಬಂಧಿಗಳ ಹೆಸರಿನಲ್ಲಿ 18 ನಿವೇಶನಗಳು ಇದೆ. ನೆಲಮಂಗಲದ ಬಳಿ ಬಂಗಲೆ ತೋಟದ ಮನೆ ಮತ್ತು 30 ಎಕರೆಯಷ್ಟು ಕೃಷಿಭೂಮಿ ಇರುವುದು ಪತ್ತೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ದರ್ಶನ್‌ ಪ್ರಕರಣದಲ್ಲಿ ತನಿಖಾಧಿಕಾರಿ

ದರ್ಶನ್ ಮತ್ತು ಸಂಗಡಿಗರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಎ.ವಿ.ಕುಮಾರ್‌ ಸಹಾಯಕ ತನಿಖಾಧಿಕಾರಿಯಾಗಿದ್ದರು. ದಕ್ಷತೆ ಮತ್ತು ಪ್ರಾಮಾಣಿಕತೆಯ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.