ADVERTISEMENT

ಸಾಧಕಿಯರಿಗೆ ಸಲಾಂ: ಬೇರೆಯವರ ಮಕ್ಕಳ 'ಮಾತೆ'

ಶ್ರೀಕಾಂತ ಕಲ್ಲಮ್ಮನವರ
Published 15 ಅಕ್ಟೋಬರ್ 2018, 1:47 IST
Last Updated 15 ಅಕ್ಟೋಬರ್ 2018, 1:47 IST
   

ಬೆಳಗಾವಿ: ‘ಬುದ್ಧಿಮಾಂದ್ಯತೆ ರೋಗವಲ್ಲ, ಅನುವಂಶಿಕವೂ ಅಲ್ಲ. ಮೆದುಳಿನ ನರವ್ಯೂಹದ ಏರುಪೇರಿನಿಂದ ಇಂತಹ ಮಕ್ಕಳು ಹುಟ್ಟುತ್ತಾರೆ. ತಾಳ್ಮೆ ಹಾಗೂ ತಾಯಿಯ ಮಮತೆಯಂತೆ ಆರೈಕೆ ಮಾಡಿದರೆ ಇವರನ್ನೂ ಸಾಮಾನ್ಯರಂತೆ ರೂಪಿಸಬಹುದು...’ ಎನ್ನುತ್ತಾರೆ ಜೀಜಾಮಾತಾ ವಿಶ್ವ ಚೇತನಾಭಿವೃದ್ಧಿ ಸಂಸ್ಥೆಯ ಸ್ಥಾಪಕಿ, ಶಾರದಾದೇವಿ ಬುದ್ಧಿಮಾಂದ್ಯ ಗಂಡು/ ಹೆಣ್ಣು ಮಕ್ಕಳ ಉಚಿತ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರದ ಮುಖ್ಯಸ್ಥೆ ಶಾಂತಾ ಜಾಧವ.

ಬಾಯಿ ಮಾತಿನಲ್ಲಿ ಅಲ್ಲ, ಆ ಪ್ರಯೋಗವನ್ನು ಯಶಸ್ವಿಯಾಗಿಯೂ ಮಾಡಿದ್ದಾರೆ. ತಮ್ಮ ಶಾಲೆಗೆ ದಾಖಲಾಗುವ ಮಕ್ಕಳ ಪೈಕಿ ಪ್ರತಿ ವರ್ಷ 10ರಿಂದ 15 ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ರೂಪಿಸುತ್ತಿರುವ ಹೆಗ್ಗಳಿಕೆ ಇವರದ್ದು. ಹೆತ್ತವರಿಗೂ ಬೇಡವಾಗಿ, ಕತ್ತಲೆ ಕೋಣೆಯೊಳಗೆ ಕಮರಿ ಹೋಗುತ್ತಿದ್ದ ಅನೇಕ ಮಕ್ಕಳಿಗೂ ಇವರು ಆಶಾಕಿರಣ.

ಹೀಗೆ ಸದ್ದಿಲ್ಲದೇ ಕ್ರಾಂತಿ ನಡೆದಿರುವುದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ. ಶಾಂತಾ ಅವರು ರಾಯಬಾಗ ತಾಲ್ಲೂಕಿನ ನಂದಿಕುಳಿ ಗ್ರಾಮದವರು. ತಂದೆ ಕೇದಾರಿ ಕೃಷಿಕ. ತಾಯಿ ಶಾರದಾ ಗೃಹಿಣಿ. ಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಇಲ್ಲದ ಕಾರಣ, ಶಾಂತಾ ಅವರು ಮೈಸೂರಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಎಂ.ಎ (ತತ್ವಶಾಸ್ತ್ರ) ಓದಿದರು. ಟಿ.ಸಿ.ಎಚ್‌, ಬಿ.ಇಡಿ ಕೂಡ ಮಾಡಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದರು.

ADVERTISEMENT

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಮಾತುಗಳ ಪ್ರೇರಣೆಯಿಂದ ಬುದ್ಧಿಮಾಂದ್ಯ ಮಕ್ಕಳ ಬದುಕಿನಲ್ಲಿ ಬೆಳಕು ಮೂಡಿಸಲು ಮುಂದಾದರು. 2004ರಲ್ಲಿ ಜೀಜಾಮಾತಾ ವಿಶ್ವಚೇತನ ಅಭಿವೃದ್ಧಿ ಸಂಸ್ಥೆ ಹುಟ್ಟುಹಾಕಿದರು. ಇದರಡಿ ಶಾರದಾದೇವಿ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಆರಂಭಿಸಿದರು. ಸದ್ಯ 102 ಮಕ್ಕಳು ಇದ್ದಾರೆ. ಇದರಲ್ಲಿ 31 ಹೆಣ್ಮಕ್ಕಳು ಇದ್ದಾರೆ. ಮಕ್ಕಳಿಗೆ ಊಟೋಪಚಾರ, ಶಿಕ್ಷಣ ಹಾಗೂ ವೈದ್ಯ ಸೇವೆ ನೀಡಲಾಗುತ್ತದೆ. ಸ್ವ ಉದ್ಯೋಗ ಕೈಗೊಳ್ಳಲು ಬೇಕಾಗುವ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ 33 ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ.

‘2012ರಿಂದ ಶಾಲೆಗೆ ಸರ್ಕಾರದ ಅನುದಾನ ಲಭಿಸುತ್ತಿದೆ. ಒಬ್ಬ ಮಗುವಿಗೆ ₹1,500 ಸಿಗುತ್ತದೆ. ಊಟೋಪಚಾರ, ಶಿಕ್ಷಣ, ವೈದ್ಯ ಸೇವೆ, ತರಬೇತಿ ಹಾಗೂ ಇತರ ಚಟುವಟಿಕೆಗೆ ಇದು ಸಾಲುವುದಿಲ್ಲ. ತರಬೇತಿ ವೇಳೆ ಮಕ್ಕಳು ತಯಾರಿಸುವ ಫಿನಾಯಿಲ್‌, ಚಾಕ್‌ಪೀಸ್‌, ಅಲಂಕಾರಿಕ ಹೂಮಾಲೆ, ಮ್ಯಾಟ್‌ಗಳನ್ನು ಮಾರಾಟ ಮಾಡಿ ಹಣಕಾಸಿನ ಕೊರತೆ ನೀಗಿಸಿಕೊಳ್ಳುತ್ತಿದ್ದೇವೆ. ಮುಗ್ಧ ಮಕ್ಕಳ ಜೊತೆಗಿದ್ದಾಗ ಹಣದ ಕೊರತೆಯು ದೊಡ್ಡ ವಿಷಯವಲ್ಲ ಬಿಡಿ’ ಎನ್ನುತ್ತಾರೆ ಶಾಂತಾ ಜಾಧವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.