ADVERTISEMENT

ಗುಪ್ತಚರ ಇಲಾಖೆ ವೈಫಲ್ಯ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:11 IST
Last Updated 19 ಆಗಸ್ಟ್ 2022, 22:11 IST

ಬೆಂಗಳೂರು: ನೆರೆ ಸಂತ್ರಸ್ತರ ಅಹವಾಲು ಆಲಿಸಲು ಮಡಿಕೇರಿಗೆ ತೆರಳಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ನಡೆದಿರುವ ದಾಳಿ ಸರ್ಕಾರಿ ಪ್ರಾಯೋಜಿತವಾದುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಆರೋಪಿಸಿದೆ.

ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಘಟನೆ ಕುರಿತು ಕೆಪಿಸಿಸಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಶುಕ್ರವಾರ ಸರಣಿ ಟ್ವೀಟ್‌ ಮಾಡಿದ್ದು, ‘ವಿರೋಧ ಪಕ್ಷದ ನಾಯಕರ ಕಾರಿನ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದಾದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೆ’ ಎಂದು ಪ್ರಶ್ನಿಸಿದೆ.

ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಇಲ್ಲ ಎಂದಾದರೆ ಸಾಮಾನ್ಯ ಜನರ ರಕ್ಷಣೆ ಈ ಸರ್ಕಾರದಿಂದ ಸಾಧ್ಯವೆ? ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹುದ್ದೆಯಲ್ಲಿ ಮುಂದುವರಿಯಲು ಅರ್ಹರೆ? ಎಂದು ಕೇಳಿದೆ.

ADVERTISEMENT

‘ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಸರ್ಕಾರವು ಹೈಕಮಾಂಡ್‌ ಮೆಚ್ಚಿಸಲು ಉತ್ತರ ಪ್ರದೇಶ ಮಾದರಿಯ ಗೂಂಡಾ ಸಂಸ್ಕೃತಿಯನ್ನು ಇಲ್ಲಿಯೂ ಪರಿಚಯಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದೆ.

*

ನಿಮ್ಮ (ಬಿಜೆಪಿ) ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಇಲ್ಲವಾದರೆ ಸಚಿವರಿಗೆ ಕಪ್ಪುಬಾವುಟ ಪ್ರದರ್ಶನ, ಗೋಬ್ಯಾಕ್‌ ಅಭಿಯಾನ ಮಾಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಲಿದೆ
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.