ಜಿಎಸ್‌ಟಿ
ಬೆಂಗಳೂರು: ನಕಲಿ ಇನ್‌ವಾಯ್ಸ್ ಸೃಷ್ಟಿಸಿ ಜಿಎಸ್‌ಟಿ ವಂಚಿಸುತ್ತಿದ್ದ ಬೃಹತ್ ಅಂತರರಾಜ್ಯ ಜಾಲವೊಂದನ್ನು ಪತ್ತೆ ಮಾಡಿರುವ ರಾಜ್ಯ ವಾಣಿಜ್ಯ ಇಲಾಖೆ ಅಧಿಕಾರಿಗಳು, ₹39 ಕೋಟಿ ವಸೂಲಿಗೆ ಕ್ರಮ ತೆಗೆದುಕೊಂಡಿದ್ದಾರೆ.
ಜನ ಸಾಮಾನ್ಯರ ಆಧಾರ್ ಮತ್ತು ಪ್ಯಾನ್ ವಿವರ ಬಳಸಿಕೊಂಡು ಜಿಎಸ್‌ಟಿ ನೋಂದಣಿ ಮಾಡಿ, ತೆರಿಗೆ ವಂಚಿಸುತ್ತಿದ್ದ ಜಾಲ ರಾಜ್ಯದಲ್ಲಿ ಸಕ್ರಿಯವಾಗಿರುವ ಬಗ್ಗೆ 2023ರಲ್ಲಿ ದೂರು ಬಂದಿತ್ತು. ಅದರಂತೆ ತನಿಖೆ ಆರಂಭಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಈ ಜಾಲದ ಕಿಂಗ್‌ಪಿನ್ ಕೈಲಾಶ್ ಬೀಷ್ಣೋಯಿ ಎಂಬುವರನ್ನು ಬಂಧಿಸಿದ್ದಾರೆ.
ನಗರದ ಮುರುಗೇಶಪಾಳ್ಯದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲ ವ್ಯಕ್ತಿಗಳು ಇತರರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಬಳಸಿಕೊಂಡು ಒಂದೇ ದಿನ ಹತ್ತು ಬ್ಯಾಂಕ್ ಖಾತೆ ತೆರೆಯಲು ಯತ್ನಿಸಿದ್ದರು. ಈ ಸಂಬಂಧ ಜೀವನ ಬಿಮಾ ನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.
‘ಈ ಜಾಲವು ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ಕರ್ನಾಟಕವನ್ನೇ ಕೇಂದ್ರವಾಗಿರಿಸಿಕೊಂಡು ಕೈಲಾಶ್ ಕಾರ್ಯನಿರ್ವಹಿಸುತ್ತಿದ್ದ. ಕರ್ನಾಟಕದಲ್ಲೇ 17 ಕಂಪನಿಗಳನ್ನು ನೋಂದಣಿ ಮಾಡಿಸಿದ್ದ. ಆ ಕಂಪನಿಗಳ ಹೆಸರಿನಲ್ಲಿ, ಕಬ್ಬಿಣದ ಗುಜರಿ ವ್ಯವಹಾರದಲ್ಲಿ ತೊಡಗಿರುವ ಕಂಪನಿಗಳಿಗೆ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿಕೊಟ್ಟಿದ್ದ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.
‘2024ರ ಡಿಸೆಂಬರ್ ವೇಳೆಗೆ ಕೈಲಾಶ್‌ನ ಸಹಚರ, ರೋಹಿತ್ ಎಂಬಾತನನ್ನು ಬಂಧಿಸಲಾಗಿತ್ತು. ಕೈಲಾಶ್‌ನ ಕರ್ನಾಟಕದಲ್ಲಿನ ವ್ಯವಹಾರಗಳನ್ನು ರೋಹಿತ್ ನೋಡಿಕೊಳ್ಳುತ್ತಿದ್ದ. ಆತ ನೀಡಿದ ಮಾಹಿತಿಯ ಮೇರೆಗೆ ಕೈಲಾಶ್‌ನ ಬಂಧನಕ್ಕೆ ಕಾರ್ಯಾಚರಣೆ ರೂಪಿಸಲಾಗಿತ್ತು’ ಎಂದು ಮಾಹಿತಿ ನೀಡಿದೆ.
‘ರೋಹಿತ್ ಬಂಧನದ ಬೆನ್ನಲ್ಲೇ ಕೈಲಾಶ್ ತಲೆಮರೆಸಿಕೊಂಡಿದ್ದ. ಆನಂತರ ಆತ ತೆಲಂಗಾಣ, ಛತ್ತೀಸಗಡ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಪ್ರಯಾಣ ಮಾಡಿದ್ದ. ಈ ಅವಧಿಯಲ್ಲಿ ಆತ ತನ್ನ ಲೊಕೇಷನ್ ಮಾಹಿತಿ ಸಿಗಬಾರದು ಎಂದು 14 ಮೊಬೈಲ್‌ಗಳನ್ನು ಬದಲಿಸಿದ್ದ’ ಎಂದು ವಿವರಿಸಿವೆ.
‘ಆತ ರಾಜಸ್ಥಾನದ ಜಾಲೋರ್‌ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆಯಿತು. ಅಲ್ಲಿನ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡಸಿ ಆತನನ್ನು ಬಂಧಿಸಲಾಯಿತು. ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಾಗಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.