
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳೆಯರ 85ನೇ ಅಥ್ಲೆಟೆಕ್ ಚಾಂಪಿಯನ್‌ಶಿಪ್ ಮೂಡುಬಿದರೆಯಲ್ಲಿ ಜ.12ರಿಂದ 16ರವರೆಗೆ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ್ ಆಳ್ವ ಅವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆಗಳ ಸಹಭಾಗಿತ್ವದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ದೇಶದ 312 ವಿಶ್ವವಿದ್ಯಾಲಯಗಳ 4,288 ಅಥ್ಲೀಟ್‌ಗಳು ಹಾಗೂ 1000ಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ 12ರಂದು ಸಂಜೆ 4.30ಕ್ಕೆ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ, ಕ್ರೀಡಾ ಜ್ಯೋತಿ ಸ್ವೀಕರಿಸುವರು. ಇದಕ್ಕೂ ಮೊದಲು ಭವ್ಯ ಮರವಣಿಗೆ, ಪಥ ಸಂಚಲನ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉಪಸ್ಥಿತರಿರುವರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅಕ್ಷತೆ ವಹಿಸುವರು. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ ಧ್ವಜಾರೋಹಣ ನೆರೆವೇರಿಸುವರು ಎಂದು ಮಾಹಿತಿ ನೀಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳಿಗೆ ಆನ್‌ಲೈನ್ ನೋಂದಣಿ ಸೌಲಭ್ಯವಿದೆ. ಐದು ದಿನಗಳ ಕ್ರೀಡಾಕೂಟದಲ್ಲಿ ತಲಾ ಎರಡು ವಿಭಾಗದಲ್ಲಿ 47 ಸ್ಪರ್ಧೆಗಳು ನಡೆಯಲಿವೆ. ಸುಸಜ್ಜಿತ ಸಿಂಥಟಿಕ್ ಟ್ರ್ಯಾಕ್‌ನಲ್ಲಿ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.