ಬೆಂಗಳೂರು: ಒಳಮೀಸಲಾತಿ ಜಾರಿ ಮಾಡಲಿಲ್ಲ ಎಂದು ಬಿಜೆಪಿಯವರು ಆ.1ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಮತ್ತು ಕರ್ನಾಟಕ ಬಂದ್ ಅರ್ಥಹೀನ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಟೀಕಿಸಿದ್ದಾರೆ.
‘ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಪರಿಶಿಷ್ಟ ಜಾತಿಗಳ ಗಣತಿ ವರದಿ ಸಲ್ಲಿಸಿದ ತಕ್ಷಣವೇ ಒಳಮೀಸಲಾತಿ ಕಲ್ಪಿಸುತ್ತೇವೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ನಾಯಕರು ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಸಮುದಾಯದ ಜನರನ್ನು ದಾರಿ ತಪ್ಪಿಸುವುದು ಬೇಡ ಎಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ನಾರಾಯಣಸ್ವಾಮಿ ಅವರು ಸಚಿವರಾಗಿದ್ದಾಗ ರಾಜ್ಯಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಪ್ರಸ್ತಾಪ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು ಎಂದು ಟೀಕಿಸಿದರು.
ಒಳಮೀಸಲಾತಿಯನ್ನು ಶೇ 15 ಅಥವಾ ಶೇ 17ರಲ್ಲಿ ಎಷ್ಟು ಪ್ರಮಾಣ ನಿಗದಿ ಮಾಡಲಾಗುತ್ತದೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಆ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ’ ಎಂದು ಮುನಿಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.