ADVERTISEMENT

ಒಳಮೀಸಲಾತಿ: ಸುಧಾಮ್‌ ದಾಸ್‌ ನಡೆಗೆ ಬಿಜೆಪಿ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 16:04 IST
Last Updated 30 ಆಗಸ್ಟ್ 2025, 16:04 IST
   

ಬೆಂಗಳೂರು: ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಎಚ್‌.ಪಿ. ಸುಧಾಮದಾಸ್‌ ಅವರು ಒಳಮೀಸಲಾತಿಯ ವಿಷಯದಲ್ಲಿ ಪಕ್ಷ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡರಾದ ಬಿ.ಎಚ್‌.ಅನಿಲ್‌ಕುಮಾರ್, ಎಂ.ಲಕ್ಷ್ಮೀನಾರಾಯಣ್‌, ವೆಂಕಟೇಶ್‌ ದೊಡ್ಡೇರಿ ಟೀಕಿಸಿದ್ದಾರೆ. 

ಒಳಮೀಸಲಾತಿ ಜಾರಿ ಆದೇಶ ಗಟ್ಟಿಗೊಳ್ಳಬೇಕಾದ ನಿರ್ಣಾಯಕ ಸನ್ನಿವೇಶದಲ್ಲಿ ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸುಧಾಮ್‌ದಾಸ್  ಅವಮಾನಿಸುತ್ತಿದ್ದಾರೆ. ಒಳಮೀಸಲಾತಿಯ 35 ವರ್ಷಗಳ ಹೋರಾಟದಲ್ಲಿ ಇದ್ದ ಸಮಾಜದ ಒಗ್ಗಟ್ಟನ್ನು ಮುರಿಯಲು ಹೊರಟಿದ್ದಾರೆ. ಸುಧಾಮದಾಸ್‌ ಅವರ ಇಂತಹ ಸ್ವಭಾವ ಅಪಾಯಕಾರಿ. ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. 

ಒಳ ಮೀಸಲಾತಿಯ ವಿಷಯದಲ್ಲಿ ಕಾಂಗ್ರೆಸ್‌ ಒಳಗೆ ಮಲ್ಲಿಕಾರ್ಜುನ ಖರ್ಗೆ, ಪುನಿಯಾ ನೇತೃತ್ವದ ದೊಡ್ಡಗುಂಪು ನಿರಂತರವಾಗಿ ಪ್ರಬಲ ವಿರೋಧ ಮಾಡಿಕೊಂಡು ಬಂದಿರುವುದು ಗುಟ್ಟಿನ ವಿಷಯವಲ್ಲ. ಆಂಧ್ರಪ್ರದೇಶ ಸರ್ಕಾರ ರಾಮಚಂದ್ರರಾಜು ಆಯೋಗದ ಶಿಫಾರಸಿನಂತೆ ಒಳಮೀಸಲಾತಿ ಜಾರಿ ಮಾಡಿದಾಗ ಸುಪ್ರೀಂಕೋರ್ಟಿಗೆ ಮೊರೆ ಹೋಗಿದ್ದು, ಕಾಂಗ್ರೆಸ್‌ ಒಳಗಿನ ಒಳಮೀಸಲಾತಿ ವಿರೋಧಿ ಗುಂಪು ಎಂದು ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.