ಬೆಂಗಳೂರು: ರಾಜ್ಯ ಸರ್ಕಾರವು ಮಾಡಿರುವ ಒಳಮೀಸಲಾತಿ ಹಂಚಿಕೆಯು ದೋಷಪೂರಿತವಾಗಿದೆ. ಒಳಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಆಶಯಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡಿದೆ ಎಂದು ಕರ್ನಾಟಕ ಮಾದಿಗ ಮತ್ತು ಉಪಜಾತಿಗಳ ಒಳಮೀಸಲಾತಿ ಒಕ್ಕೂಟವು ಆಕ್ರೋಶ ವ್ಯಕ್ತಪಡಿಸಿದೆ.
ಒಕ್ಕೂಟವು ನಗರದ ಪುರಭವನದಲ್ಲಿ ಭಾನುವಾರ, ‘ಒಳಮೀಸಲಾತಿ ನಂತರ ಮಾದಿಗರ ಮುಂದಿನ ನಡೆಯ ವಿಶೇಷ ಸಭೆ’ ಆಯೋಜಿಸಿತ್ತು. ಸಂಸದರಾದ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಕೆ.ಬಿ.ಕೃಷ್ಣಮೂರ್ತಿ ಮತ್ತು ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.
ನಿಖರ ದತ್ತಾಂಶ ಮತ್ತು ಅಂತರ ಹಿಂದುಳಿದಿರುವಿಕೆಯನ್ನು ಮಾನದಂಡಗಳನ್ನು ಅನುಸರಿಸಿ ವರ್ಗೀಕರಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗವೂ ಅದೇ ಆಧಾರದಲ್ಲಿ ಐದು ವರ್ಗೀಕರಣಗಳನ್ನು ಮಾಡಿ ಶಿಫಾರಸು ಮಾಡಿತ್ತು. ಸರ್ಕಾರವು ಅದನ್ನು ಕಡೆಗಣಿಸಿ, ತನ್ನಿಷ್ಟದಂತೆ ಒಳಮೀಸಲಾತಿ ಘೋಷಿಸಿದೆ. ಇದರ ವಿರುದ್ಧ ಹೋರಾಟ ನಡೆಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಆಯೋಗವು ಸಣ್ಣ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿ ನೀಡಿ ಶಿಫಾರಸು ಮಾಡಿತ್ತು. ಆದರೆ ಸರ್ಕಾರವು ಪ್ರಬಲ ಜಾತಿಗಳ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಾಜಕೀಯ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ಈ ನಡೆಯಿಂದಾಗಿ ದುರ್ಬಲ ಜಾತಿಗಳ ಅವಕಾಶಗಳನ್ನು ಪ್ರಬಲ ಜಾತಿಗಳು ಕಿತ್ತುಕೊಳ್ಳುವಂತಾಗಿದೆ. ಇದನ್ನು ತಡೆಯಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.