ಸಿದ್ದರಾಮಯ್ಯ
ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಸಲ್ಲಿಸಿದ ವರದಿಯ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದ್ದು, ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಗೊತ್ತಾಗಿದೆ.
‘ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸಲಾಯಿತು. ಆಯೋಗದ ವರದಿಯ ಬಗ್ಗೆ ಎಲ್ಲ ಸಚಿವರೂ ಸಹಮತ ಹೊಂದಿದ್ದಾರೆ. ಸಣ್ಣ–ಪುಟ್ಟ ಲೋಪಗಳು ಇದ್ದರೆ ಸರಿಪಡಿಸಿಕೊಂಡು ಜಾರಿ ಮಾಡಲು ಎಲ್ಲರೂ ಒಪ್ಪಿದರು’ ಎಂದು ಮೂಲಗಳು ಹೇಳಿವೆ.
‘ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ಪ್ರತ್ಯೇಕವಾಗಿ ಗುರುತಿಸಿ ಶೇ 1ರಷ್ಟು ಮೀಸಲಾತಿ ನೀಡುವ ಅಗತ್ಯ ಇರಲಿಲ್ಲ. ಈ ಎರಡೂ ಉಪ ಜಾತಿಗಳು ಬಲಗೈ ಅಥವಾ ಎಡಗೈ ಪಂಗಡದಲ್ಲೇ ಬರುತ್ತವೆ. ಅದನ್ನು ಪರಿಷ್ಕರಿಸುವುದು ಸೂಕ್ತ ಎಂದು ಹಿರಿಯ ಸಚಿವರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.
‘ಸಚಿವ ಸಂಪುಟದಲ್ಲಿ ವರದಿಯನ್ನು ಮಂಡಿಸಿಯಾಗಿದೆ. ಇಂದೇ ಅಂಗೀಕರಿಸಿದರೆ ಒಳ್ಳೆಯದು ಎಂದು ಮತ್ತೊಬ್ಬ ಹಿರಿಯ ಸಚಿವರು ಹೇಳಿದರು. ವರದಿ ಸುದೀರ್ಘವಾಗಿದ್ದು, ಎಲ್ಲರೂ ಒಂದು ಸಲ ಓದಿಕೊಂಡು ಬಂದರೆ ಸೂಕ್ತ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು’ ಎಂದು ಮೂಲಗಳು ತಿಳಿಸಿವೆ.
‘ಸರ್ಕಾರ ರಚಿಸಿದ ಆಯೋಗವು ನೀಡಿದ ವರದಿಯನ್ನು ಒಂದೋ ಯಥಾವತ್ತಾಗಿ ಅಂಗೀಕರಿಸಬೇಕು ಅಥವಾ ಸಣ್ಣಪುಟ್ಟ ಪರಿಷ್ಕರಣೆಯೊಂದಿಗೆ ಪುರಸ್ಕರಿಸಬೇಕು, ಇಲ್ಲವೇ ತಿರಸ್ಕರಿಸಬೇಕು. ಅದು ಬಿಟ್ಟರೆ ಬೇರೆ ದಾರಿ ಇಲ್ಲ’ ಎಂದು ಸಿದ್ದರಾಮಯ್ಯ ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದರು. ‘ನಮ್ಮ ಸರ್ಕಾರವೇ ಆಯೋಗ ರಚಿಸಿ ವರದಿ ಪಡೆದಿರುವಾಗ, ತಿರಸ್ಕರಿಸುವುದು ಸರಿಯಲ್ಲ ಎಂದು ಬಹುತೇಕ ಸಚಿವರು ಅಭಿಪ್ರಾಯಪಟ್ಟರು’ ಎಂದು ಮೂಲಗಳು ಹೇಳಿವೆ.
‘ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಒಳಮೀಸಲಾತಿ ಜಾರಿಯ ಬಗ್ಗೆ ವಾಗ್ದಾನ ಮಾಡಿದ್ದು, ಪ್ರಣಾಳಿಕೆಯಲ್ಲೂ ಸೇರಿಸಿದ್ದೇವೆ. ಹೀಗಿರುವಾಗ ಜಾರಿ ಮಾಡಲೇಬೇಕು’ ಎಂದು ಪರಿಶಿಷ್ಟ ಜಾತಿಯನ್ನು ಪ್ರತಿನಿಧಿಸುವ ಎಲ್ಲ ಸಚಿವರು ಪ್ರತಿಪಾದಿಸಿದರು’ ಎಂದು ಮೂಲಗಳು ತಿಳಿಸಿವೆ.
‘ಆಗ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ಎಲ್ಲರ ಸಹಮತ ಇರುವುದರಿಂದ ಎರಡು ದಿನಗಳಲ್ಲೇ ಮತ್ತೊಂದು ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬಹುದು. ಇಲ್ಲವಾದರೆ ತಪ್ಪು ಸಂದೇಶ ಹೋಗುತ್ತದೆ’ ಎಂದು ಹೇಳಿದರು. ಆಗ ಮಾತನಾಡಿದ ಡಿ.ಕೆ. ಶಿವಕುಮಾರ್, ‘ವರದಿಯನ್ನು ತಿರಸ್ಕರಿಸುವುದು ಬೇಡ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿ ಮಾಡೋಣ ಎಂದು ಸಲಹೆ ನೀಡಿದರು’ ಎಂದು ಮೂಲಗಳು ಹೇಳಿವೆ.
‘ಆಗಸ್ಟ್ 16ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಹೇಳಿದರು’ ಎಂದು ಮೂಲಗಳು ಹೇಳಿವೆ.
ಪರಿಶಿಷ್ಟ ಸಮುದಾಯದ ಸಚಿವರ ಸಭೆ: ‘ಆ.16 ಕ್ಕೂ ಮೊದಲೇ ಗೃಹ ಸಚಿವ ಜಿ.ಪರಮೇಶ್ವರ ಅವರ ನಿವಾಸದಲ್ಲಿ ಪರಿಶಿಷ್ಟ ಸಮುದಾಯದ ಸಚಿವರ ಸಭೆ ನಡೆಯಲಿದೆ. ವರದಿ ಶಿಫಾರಸಿನ ಜಾರಿಯ ಬಗ್ಗೆ ಎಡಗೈ ಮತ್ತು ಬಲಗೈ ಸಮುದಾಯದ ಸಚಿವರು ಸೇರಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.