ADVERTISEMENT

ಒಳಮೀಸಲಾತಿಗೆ ಮಾದಿಗ ಸಮುದಾಯದ ಪಾದಯಾತ್ರೆ: ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ

ಸರ್ಕಾರಕ್ಕೆ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 13:31 IST
Last Updated 17 ಜನವರಿ 2021, 13:31 IST
ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ
ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ   

ಚಿತ್ರದುರ್ಗ: ಒಳಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಪಾದಯಾತ್ರೆ ನಡೆಸಲು ಮಾದಿಗ ಸಮುದಾಯ ಮುಂದಾಗಿದೆ. ಸಮಾಜದ ಅಭಿಪ್ರಾಯದ ಮೇರೆಗೆ ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದೆ ಎಂದುಹಿರಿಯೂರಿನ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

‘ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯಕ್ಕೆ ಎಲ್ಲ ರೀತಿಯಿಂದಲೂ ಅನ್ಯಾಯವಾಗಿದೆ. ಅಧಿಕಾರಕ್ಕೆ ಬಂದ ಎಲ್ಲ ರಾಜಕೀಯ ಪಕ್ಷಗಳು ಸುಳ್ಳು ಆಶ್ವಾಸನೆ ನೀಡಿಸಮುದಾಯಕ್ಕೆ ಅನ್ಯಾಯ ಮಾಡಿವೆ.ಮಾದಿಗ ಸಮುದಾಯ ಒಗ್ಗೂಡಿ ಹೋರಾಟ ನಡೆಸಲು ಕಾಲ ಪಕ್ವವಾಗಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಸರ್ಕಾರಕ್ಕೆ ಸಲ್ಲಿಕೆಯಾದ ಆಯೋಗಗಳ ವರದಿಯನ್ನು ಜಾರಿಗೊಳಿಸಲಾಗಿದೆ. ಆದರೆ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮಾತ್ರ ಬಚ್ಚಿಟ್ಟುಕೊಳ್ಳಲಾಗಿದೆ. ಇದನ್ನು ಬಹಿರಂಗಪಡಿಸುವ ಮೂಲಕ ಯಥಾವತ್ತು ವರದಿ ಜಾರಿಗೆ ಮುಖ್ಯಮಂತ್ರಿ ಮುಂದಾಗಬೇಕು. ಇಲ್ಲದಿದ್ದರೆ, ಹೋರಾಟಕ್ಕೆ ಸಮುದಾಯ ಸನ್ನದ್ಧವಾಗಿದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಒಳಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ನಡೆದ ಚಳವಳಿಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ತ್ಯಾಗಗಳನ್ನು ಮಾಡಿ ಹೋರಾಟ ಕಟ್ಟಿದ್ದಾರೆ. ಇದು ಗೊತ್ತಿದ್ದು ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಹಸಿವು, ಬಡತನ, ಅನಕ್ಷರತೆಯ ನೋವಿನಿಂದ ಬದುಕು ಸವೆಸಿದ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ರಾಜಕಾರಣದ ನೆಪ ಹೇಳಿ ಸೌಲಭ್ಯ ವಂಚಿಸುವುದು ಸರಿಯಲ್ಲ. ಸಮುದಾಯವನ್ನು ಪದೇ ಪದೇ ವಂಚಿಸಲು ಸಾಧ್ಯವೂ ಇಲ್ಲ. ಈ ತಪ್ಪು ಮುಂದುವರಿದರೆ ಸರ್ಕಾರ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ’ ಎಂದರು.

‘ಮಾದಿಗ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವನ್ನು ಕಾಂಗ್ರೆಸ್‌ ಅನುಭವಿಸಿದೆ. ಸಿದ್ದರಾಮಯ್ಯ ಅವರಿಗೆ ತಪ್ಪಿನ ಅರಿವಾಗಿದೆ. ಸಮುದಾಯದ ಬೆಂಬಲ ಪಡೆದಿರುವ ಬಿಜೆಪಿ, ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಉಡುಗೊರೆ ಏಕೆ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.