ಸಾಂದರ್ಭಿಕ ಚಿತ್ರ
ಬೆಂಗಳೂರು: ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇಕಡ 17ರಷ್ಟು ಮೀಸಲಾತಿಯ ಪೈಕಿ, ಎಡಗೈ ಸಂಬಂಧಿತ ಜಾತಿಗಳಿರುವ ‘ಎ’ ಪ್ರವರ್ಗಕ್ಕೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ ‘ಬಿ’ ಪ್ರವರ್ಗಕ್ಕೆ ಶೇ 6 ಹಾಗೂ ಸ್ಪೃಶ್ಯ ಮತ್ತು ಅಲೆಮಾರಿ ಜಾತಿಗಳಿರುವ ‘ಸಿ’ ಪ್ರವರ್ಗಕ್ಕೆ ಶೇ 5ರಷ್ಟು ಒಳ ಮೀಸಲಾತಿ ಜಾರಿಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
101 ಜಾತಿಗಳನ್ನು ‘ಎ’, ‘ಬಿ’, ‘ಸಿ’ ಎಂದು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಸರ್ಕಾರಿ ಹುದ್ದೆಗಳಿಗೆ ಒಳ ಮೀಸಲಾತಿ ಕಾರಣಕ್ಕೆ ತಡೆ ಹಿಡಿಯಲಾಗಿದ್ದ ನೇರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಾಣಾ ಇಲಾಖೆ (ಡಿಪಿಎಆರ್) ಕ್ರಮ ವಹಿಸಬೇಕು. ಎಲ್ಲ ಇಲಾಖೆಗಳು ಮತ್ತು ಅವುಗಳ ಅಧೀನದ ಎಲ್ಲ ನಿಗಮ, ಮಂಡಳಿ, ಸಂಸ್ಥೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆಯನ್ನೂ ಮುಂದುವರಿಸಬಹುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಒಳ ಮೀಸಲಾತಿ ಕಲ್ಪಿಸಲು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಸಲ್ಲಿಸಿದ್ದ ಶಿಫಾರಸುಗಳನ್ನು ಕೆಲವು ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸಲು, ಆಗಸ್ಟ್ 19ರಂದು ನಡೆದಿದ್ದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ನಾಗಮೋಹನದಾಸ್ ಆಯೋಗವು ಪರಿಶಿಷ್ಟ ಜಾತಿಗಳನ್ನು ‘ಎ’, ‘ಬಿ’, ‘ಸಿ’, ‘ಡಿ’, ‘ಇ’ ಎಂದು ಐದು ಪ್ರವರ್ಗಗಳಾಗಿ ವಿಂಗಡಿಸಿ, ಮೀಸಲಾತಿ ಹಂಚಿಕೆ ಮಾಡಿ ಶಿಫಾರಸು ಮಾಡಿತ್ತು. ಆ ವರದಿಯಲ್ಲಿ ಪ್ರವರ್ಗ ‘ಇ’ಯಲ್ಲಿರುವ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಈ ಮೂರು ಸಮುದಾಯಗಳು ಮೂಲ ಜಾತಿಯನ್ನು ತಿಳಿಸದೇ ಇರುವುದರಿಂದ ಪ್ರವರ್ಗ ‘ಎ’ ಅಥವಾ ಪ್ರವರ್ಗ ‘ಬಿ’ ಅಡಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಗರಿಷ್ಠ ವಯೋಮಿತಿ ಸಡಿಲಿಕೆಗೂ ಅವಕಾಶ
ಉದ್ಯೋಗಗಳ ನೇಮಕಾತಿಯಲ್ಲಿಎಲ್ಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲು ಕೂಡಾ ಡಿಪಿಎಆರ್ ಅಗತ್ಯ ಕ್ರಮ ವಹಿಸಬೇಕು ಎಂದು ಆದೇಶ ಹೇಳಿದೆ.
ಹೊಸ ದತ್ತಾಂಶ ಅಥವಾ ಮಾಹಿತಿ ಬಂದಾಗ ಅಗತ್ಯ ಮಾರ್ಪಾಡುಗಳನ್ನು ಮಾಡಲು ಕರ್ನಾಟಕ ರಾಜ್ಯ ಎಸ್‌ಸಿ ಮತ್ತು ಎಸ್‌ಟಿ ಆಯೋಗಕ್ಕೆ ಅಧಿಕಾರ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಕಾಯ್ದೆ 2002ಕ್ಕೆ ತಿದ್ದುಪಡಿ ಮಾಡಲಾಗುವುದು ಎಂದೂ ತಿಳಿಸಲಾಗಿದೆ.
‘ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆ ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿ, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚಿಸಲಾಗುವುದು. ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಕ್ರಮ ವಹಿಸಬೇಕು. ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.