ADVERTISEMENT

ಒಳಮೀಸಲಾತಿ | ಸರ್ಕಾರ ನಿರ್ಲಕ್ಷಿಸಿದರೆ ಉಗ್ರ ಹೋರಾಟ: ಪಿ.ರಾಜೀವ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 14:49 IST
Last Updated 15 ಸೆಪ್ಟೆಂಬರ್ 2025, 14:49 IST
ಪಿ. ರಾಜೀವ್
ಪಿ. ರಾಜೀವ್   

ಬೆಂಗಳೂರು: ‘ಒಳಮೀಸಲಾತಿ ವಿಚಾರದಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳು ನೀಡಿರುವ ಒಂದು ವಾರದ ಗಡುವನ್ನು ಸರ್ಕಾರ ಹಗುರವಾಗಿ ಪರಿಣಿಸಬಾರದು. ಬುಧವಾರ ಸಂಜೆ ಒಳಗೆ ತೀರ್ಮಾನ ಪ್ರಕಟಿಸದೇ ಇದ್ದರೆ, ಮುಂದೆ ಹೋರಾಟ ನಡೆಸುವ ಬಗ್ಗೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಬಳಿ ಎರಡು ದಿನಗಳಿವೆ. ಇಷ್ಟರಲ್ಲೇ ನಮ್ಮನ್ನು ಕರೆದು ಮಾತನಾಡಬೇಕಿತ್ತು. ಬೇಡಿಕೆ ಮರು ಪರಿಶೀಲಿಸುವ ಭರವಸೆ ನೀಡಬೇಕಿತ್ತು’ ಎಂದರು.

‘ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ನಿರ್ಲಕ್ಷಿಸಿರುವುದಕ್ಕೆ ಸರ್ಕಾರ ಮುಂದೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸಚಿವ ರಾಮಲಿಂಗಾರೆಡ್ಡಿಯವರಿಗೆ ಕೊಟ್ಟ ಮನವಿ ಪತ್ರಕ್ಕೆ ಹಿಂಬರಹ ಕೊಟ್ಟಿಲ್ಲ. ನಮ್ಮ ಬೇಡಿಕೆ ಬಗ್ಗೆ ಕೈಗೊಂಡ ಕ್ರಮಗಳೇನು? ಸಾವಿರಾರು ಜನರು ಬೀದಿಗಿಳಿದು ಹೋರಾಟ ಮಾಡಿದ ಬಗ್ಗೆ ಸರ್ಕಾರದ ನಿಲುವು ಏನು’ ಎಂದು ಅವರು ಪ್ರಶ್ನಿಸಿದರು.

ADVERTISEMENT

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಭೋವಿ, ಬಂಜಾರ, ಕೊರಚ, ಕೊರಮ ಈ ನಾಲ್ಕು ಜಾತಿಗಳಿಗೆ ಶೇ 4.5ರಷ್ಟು ಮೀಸಲಾತಿ ಪ್ರಕಟಿಸಿತ್ತು. 59 ಅಲೆಮಾರಿ ಜಾತಿಗಳಿದ್ದು, ಅವರಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ನೀಡಿತ್ತು. ಇವೆರಡೂ ಪ್ರವರ್ಗಗಳನ್ನು ಒಂದುಗೂಡಿಸಿ ಸುಮಾರು 63 ಜಾತಿಗಳಿಗೆ ಬಿಜೆಪಿ ಸರ್ಕಾರ ಕೊಟ್ಟಷ್ಟೇ ಮೀಸಲಾತಿ ಕೊಟ್ಟಿದ್ದರೂ ಶೇ 5.5 ಮೀಸಲಾತಿ ಸಿಗಬೇಕಿತ್ತು. ಕಾಂಗ್ರೆಸ್ ಸರ್ಕಾರ 2 ಪ್ರವರ್ಗಗಳನ್ನು ಸೇರಿಸಿ ಶೇ 5ಕ್ಕೆ ನಿಗದಿ ಮಾಡಿ, ಶೇ 0.5ರಷ್ಟು ಮೀಸಲಾತಿಯನ್ನು ಕಿತ್ತುಕೊಂಡಿದೆ’ ಎಂದು ಅವರು ಹೇಳಿದರು.


ಛಲವಾದಿ ನಾರಾಯಣಸ್ವಾಮಿ

‘ಕುರುಬರಿಗೆ ಎಸ್‌ಟಿ ಸ್ಥಾನ: ಸಿ.ಎಂ ಹೋರಾಟ’

‘ಶೇ 7ರಷ್ಟು ಮೀಸಲಾತಿ ಹೊಂದಿರುವ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯದ ಹಲವು ಪಂಗಡಗಳನ್ನು ಸೇರಿಸಲು ಹೊರಟಿರುವ ಸಿದ್ದರಾಮಯ್ಯ ಸ್ವಜಾತಿಯವರಿಗೆ ಲಾಭ ಮಾಡಿಕೊಡಲು ಹೋರಾಟ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು. ‘ಹಿಂದೆ ಪರಿಶಿಷ್ಟ ಪಂಗಡಕ್ಕೆ ಶೇ 3ರಷ್ಟು ಪರಿಶಿಷ್ಟ ಜಾತಿಗೆ ಶೇ 15ರಷ್ಟು ಮೀಸಲಾತಿ ಇತ್ತು.  ಕ್ರಮವಾಗಿ 3 ಅನ್ನು 7 15 ಅನ್ನು 17ಕ್ಕೆ ಹೆಚ್ಚಿಸಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ. ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಕುರುಬರಿಗೆ ಹಂಚಲು ಸಿದ್ದರಾಮಯ್ಯ ಹೊರಟಿದ್ದಾರೆ’ ಎಂದು ಹೇಳಿದರು. ‘ಹಿಂದೆಯೂ ಇದೇ ರೀತಿ ಕೆಲವು ಜಾತಿಗಳನ್ನು ಮೀಸಲಾತಿ ಪಡೆಯುವ ಜಾತಿಗಳ ಪಟ್ಟಿಗೆ ಸೇರಿಸಿದಾಗ ವಿ.ಶ್ರೀನಿವಾಸಪ್ರಸಾದ್ ಅವರು ಯಾರು ಹೆಲಿಕಾಪ್ಟರ್‌ ಕೊಳ್ಳಲು ಸಾಧ್ಯವೋ ಯಾರು ಬೆಂಝ್ ಕಾರು ಕೊಳ್ಳಲು ಶಕ್ತಿ ಹೊಂದಿದ್ದಾರೋ ಅಂತಹ ಸಮುದಾಯಗಳನ್ನು ಮತ ಬ್ಯಾಂಕ್ ಕಾರಣಕ್ಕಾಗಿ ಮೀಸಲಾತಿಗೆ ಸೇರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು’ ಎಂದರು.‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.