ADVERTISEMENT

ಒಳಮೀಸಲಾತಿ ವರದಿ ಯಥಾವತ್ ಜಾರಿಗೆ ತನ್ನಿ: ಸಂಸದ ಗೋವಿಂದ ಕಾರಜೋಳ

ರಾಜ್ಯ ಸರ್ಕಾರಕ್ಕೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 14:25 IST
Last Updated 2 ಸೆಪ್ಟೆಂಬರ್ 2025, 14:25 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ಒಳಮೀಸಲಾತಿ ಸಂಬಂಧ ಜೆ.ಸಿ.ಮಾಧುಸ್ವಾಮಿ ಸಮಿತಿಯ ವರದಿ ಅಥವಾ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಆಯೋಗದ ವರದಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರವು ಯಥಾವತ್ತಾಗಿ ಅನುಷ್ಠಾನಕ್ಕೆ ತರಬೇಕು ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ಅನುಗುಣವಾಗಿಯೇ ನಾಗಮೋಹನದಾಸ್ ಆಯೋಗವು ಶಿಫಾರಸು ಮಾಡಿತ್ತು. ಆದರೆ ಅದನ್ನು ಕಡೆಗಣಿಸಿದ ಸರ್ಕಾರವು, ತನ್ನಿಚ್ಛೆಯಂತೆ ಒಳಮೀಸಲಾತಿಯನ್ನು ಘೋಷಿಸಿದೆ. ಇದು ಸಾಮಾಜಿಕ ನ್ಯಾಯದ ತೀರ್ಮಾನವಲ್ಲ. ಬದಲಿಗೆ ರಾಜಕೀಯ ತೀರ್ಮಾನ’ ಎಂದು ಆರೋಪಿಸಿದರು.

‘ಜೆ.ಸಿ.ಮಾಧುಸ್ವಾಮಿ ಸಮಿತಿಯ ವರದಿಯಲ್ಲಿ ಮಾಡಲಾಗಿದ್ದ ಒಳಮೀಸಲಾತಿ ಶಿಫಾರಸು ನ್ಯಾಯೋಚಿತವಾಗಿತ್ತು. ರಾಜ್ಯ ಸರ್ಕಾರವು ಈ ಎರಡು ವರದಿಗಳಲ್ಲಿ ಯಾವುದಾದರೂ ಒಂದನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ‘ನಾಗಮೋಹನದಾಸ್‌ ಆಯೋಗದ ವರದಿ ಸಿದ್ಧಪಡಿಸಲು ₹150 ಕೋಟಿ ವೆಚ್ಚ ಮಾಡಲಾಗಿದೆ. ಅದನ್ನು ಅನುಷ್ಠಾನಕ್ಕೆ ತಂದರೆ, ಮಾದಿಗರ 35 ವರ್ಷಗಳ ಹೋರಾಟಕ್ಕೆ ಫಲ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸರ್ಕಾರದ ನಡೆಯಿಂದ ಮಾದಿಗರು ಮತ್ತೆ ಹೋರಾಟಕ್ಕೆ ಇಳಿಯಬೇಕಾದ ಸ್ಥಿತಿಬಂದಿದೆ. ಈ ತಪ್ಪನ್ನು ಸರಿಪಡಿಸದೇ ಇದ್ದರೆ, ಮಾದಿಗರು ಮತ್ತೆ ಹೋರಾಟಕ್ಕೆ ಇಳಿಯಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.