ADVERTISEMENT

ಬೆಂಗಳೂರು| ನಾಳೆಯಿಂದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ

‘ಉತ್ಪಾದನೋತ್ತರ ಕೃಷಿ– ರೈತರ ಸಬಲೀಕರಣ’ ಘೋಷವಾಕ್ಯದಡಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 16:15 IST
Last Updated 4 ಫೆಬ್ರುವರಿ 2026, 16:15 IST
ಎನ್‌. ಚಲುವರಾಯಸ್ವಾಮಿ
ಎನ್‌. ಚಲುವರಾಯಸ್ವಾಮಿ   

ಬೆಂಗಳೂರು: ‘ಉತ್ಪಾದನೋತ್ತರ ಕೃಷಿ– ರೈತರ ಸಬಲೀಕರಣ’ ಪರಿಕಲ್ಪನೆಯಡಿ ರೈತರನ್ನು ಉದ್ಯಮಿಗಳನ್ನಾಗಿಸುವ ಆಶಯದಡಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಫೆ.6ರಿಂದ ಮೂರು ದಿನ ನಡೆಯಲಿದೆ.

ನಗರದ ಅರಮನೆ ಮೈದಾನದಲ್ಲಿ ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.6ರಂದು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜಸಿಂಗ್‌ ಚೌಹಾಣ್‌ ಅವರು ಫೆ.8ರಂದು ನಡೆಯುವ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ಉತ್ಪಾದನೋತ್ತರ ಕೃಷಿ ವಿಷಯದ ಮೇಲೆ ದೇಶದಲ್ಲೇ ಮೊದಲ ಬಾರಿಗೆ ಮೇಳವನ್ನು ಆಯೋಜಿಸಲಾಗುತ್ತಿದೆ. ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ, ಬ್ರ್ಯಾಂಡಿಂಗ್‌ ಮತ್ತು ಕ್ರೆಡಿಟ್‌ ಸೇವೆ ಎಂಬ ಮೂರು ಉಪ ಪರಿಕಲ್ಪನೆಗಳಿವೆ. ಈ ಮೂಲಕ ರೈತರು ತಮ್ಮ ಬೆಳೆಯನ್ನು ಬ್ರ್ಯಾಂಡಿಂಗ್‌ ಮಾಡಿ, ನೇರ ಮಾರುಕಟ್ಟೆಯಲ್ಲಿ ಒಂದರಿಂದ ನಾಲ್ಕು ಪಟ್ಟು ಲಾಭವನ್ನು ಗಳಿಸಿ ಕೃಷಿ ಉದ್ಯಮಿಗಳನ್ನಾಗಿ ಮಾಡುವ ಉದ್ದೇಶವಿದೆ’ ಎಂದರು.

ADVERTISEMENT

‘ಕಾಂಗ್ರೆಸ್‌ ಸರ್ಕಾರ 2017ರಲ್ಲಿ ಆರಂಭಿಸಲಾದ ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳ, ಕೋವಿಡ್‌ ಸಂದರ್ಭದಲ್ಲಿ ಮೂರು ವರ್ಷ ನಡೆದಿರಲಿಲ್ಲ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಮೇಲೆ 2023ರಿಂದ ಪ್ರತಿವರ್ಷ ಮೇಳವನ್ನು ಆಯೋಜಿಸಲಾಗುತ್ತಿದೆ. ಕಳೆದ ವರ್ಷ 10 ದೇಶ, 25 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ₹185 ಕೋಟಿ ಮೌಲ್ಯದ ಒಪ್ಪಂದಗಳಾಗಿತ್ತು. ಈ ಬಾರಿ ಇದಕ್ಕಿಂತ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ, ರಾಜ್ಯ ಬೀಜ ನಿಗಮದ ವತಿಯಿಂದ ಮೇಳವನ್ನು ಆಯೋಜಿಸಲಾಗುತ್ತಿದ್ದು, ಸೆಕೆಂಡರಿ ಕೃಷಿ ನಿರ್ದೇಶನಾಲಯ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ, ಜಲಾನಯನ ಅಭಿವೃದ್ಧಿ ಇಲಾಖೆ, ಗೆಸೆಲ್‌ಶಾಫ್ಟ್‌ ಫ್ಯೂರ್‌ ಇಂಟರ್‌ನ್ಯಾಷನಲ್‌ ಜುಸಾಮೆನ್‌ ಅರ್ಬೈಟ್‌ ಸಹಯೋಗವಿದೆ. ನವೀನ, ಸುಸ್ಥಿರ ಮತ್ತು ಮಾರುಕಟ್ಟೆ ಸಮನ್ವಯದ ಮೂಲಕ ಆಧುನಿಕ ಮೌಲ್ಯ ಸರಪಳಿಯಲ್ಲಿ ರೈತರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಮೇಳದಲ್ಲಿ 14 ಕೃಷಿ ಪಂಡಿತ ಹಾಗೂ 108 ಕೃಷಿ ಸಾಧಕ ಪ್ರಶಸ್ತಿ ಸೇರಿದಂತೆ ಒಟ್ಟಾರೆ 122 ಪ್ರಶಸ್ತಿಗಳನ್ನು ಸಿದ್ದರಾಮಯ್ಯ ಅವರು ಫೆ.6ರಂದು ಪ್ರದಾನ ಮಾಡಲಿದ್ದಾರೆ ಎಂದರು.

1.25 ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ

ರಾಜ್ಯ ಸರ್ಕಾರ ಸಿರಿಧಾನ್ಯ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದು ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಸಹಾಯಧನ ನೀಡುತ್ತಿದೆ. 55 ಸಾವಿರ ಹೆಕ್ಟೇರ್‌ನಲ್ಲಿ ಸಾವಯವ ಕೃಷಿ ಚಟುವಟಿಕೆ ನಡೆಯುತ್ತಿದ್ದು ಇದನ್ನು 1.25 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ’ ಎಂದು ಚಲುವರಾಯಸ್ವಾಮಿ ತಿಳಿಸಿದರು. ‘ಕಾಳಸಂತೆಯಲ್ಲಿ ಗೊಬ್ಬರ ಮಾರಾಟವನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಲಭ್ಯವಾಗಬೇಕಿರುವ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಅವರಿಗೇ ತಲುಪಿಸಲಾಗುತ್ತದೆ. 25 ದಿನ ನೀರಿನಲ್ಲಿ ಮುಳುಗಿದ್ದರೂ ಬೆಳೆಗೆ ಹಾನಿಯಾಗದಂತಹ ಭತ್ತದ ತಳಿಯನ್ನು ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಬೆಳೆಸಲಾಗಿದೆ. ಐದು ವಿಶ್ವವಿದ್ಯಾಲಯಗಳು ಎರಡೂ ವರ್ಷದಲ್ಲಿ ತಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೂರಕ ಕೆಲಸ ಮಾಡಿವೆ’ ಎಂದು ಹೇಳಿದರು. ‘ರೈತರ ಆತ್ಮಹತ್ಯೆಗೆ ಕೃಷಿ ನಡೆಯೊಂದೇ ಕಾರಣ ಅಲ್ಲ. ಅದಕ್ಕೆ ಹಲವಾರು ಕಾರಣಗಳಿವೆ.  ಐದು ಗ್ಯಾರಂಟಿಗಳು ಸೇರಿದಂತೆ ಹಲವು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ ₹10 ಸಾವಿರ ಸಿಗುತ್ತದೆ. ಹೀಗಾಗಿ ರೈತರು ಆತ್ಮಸ್ಥೈರ್ಯದಿಂದ ಬದುಕಬೇಕು. ಸಾವೊಂದೇ ಪರಿಹಾರ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.