ಬೆಂಗಳೂರು: ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ದಿವ್ಯಜ್ಯೋತಿ ಸೇವಾ ಟ್ರಸ್ಟ್ ಸಹಯೋಗದಲ್ಲಿ, ಇದೇ 26ಕ್ಕೆ ದುಬೈನಲ್ಲಿ ಅಂತರರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ ನಡೆಲಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಲೋಕೇಶ್ವರ್, ‘ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷರಾದ ಪಂಡಿತಾರಾಧ್ಯಶಿವಾಚಾರ್ಯ ಸ್ವಾಮೀಜಿ ಸಮ್ಮೇಳನದ ಸಾನ್ನಿಧ್ಯ ವಹಿಸಲಿದ್ದು, ಹಿರಿಯ ವಿಜ್ಞಾನಿ ಡಾ.ಎ.ಎಸ್.ಕಿರಣ್ ಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ’ ಎಂದರು.
‘ಸಾಮಾಜಿಕ ಸಮಾನತೆ, ಜಾತ್ಯಾತೀತ ಪರಿಕಲ್ಪನೆ ಹಾಗೂ ಲಿಂಗ ಸಮಾನತೆಯನ್ನು, ಬಸವಾದಿ ಶರಣರ ವಚನ ಸಾಹಿತ್ಯದ ತಿರುಳನ್ನು ವಿಶ್ವದಾದ್ಯಂತ ಪಸರಿಸುವ ದೃಷ್ಟಿಯಿಂದ ಈ ಸಮ್ಮೇಳನ ಆಯೋಜಿಸಲಾಗಿದೆ. ಯುನೈಟೆಡ್ ಎಮಿರೆಟ್ಸ್‌ನ (ಯುಎಇ)ಎಲ್ಲ ಕನ್ನಡಪರ ಸಂಘಟನೆಗಳಿಂದ ಅಂದಾಜು 2,000 ಜನ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
‘ಹಿರಿಯ ವಿಜ್ಞಾನಿ ಡಾ.ಎ.ಎಸ್.ಕಿರಣ್‌ಕುಮಾರ್, ವಿಜ್ಞಾನಿಗಳಾದ ಡಾ.ವೀಣಾ ಅಶೋಕ್ ಹಾಗೂ ಡಾ.ಜ್ಯೋತಿ ಅವರಿಗೆ ‘ಅಕ್ಕ ಕಾಯಕ ರತ್ನ–2018 ’ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಹಿತಿ ರಂಜಾನ್ ದರ್ಗಾ, ಚಿಂತಕ ಡಾ.ಸಿ.ಸೋಮಶೇಖರ್, ವೀಣಾ ಬನ್ನಂಜೆ, ಚಕ್ರವರ್ತಿ ಸೂಲಿಬೆಲಿ ಸೇರಿದಂತೆ ಹಲವರು ವಚನ ಸಾಹಿತ್ಯದ ಮೌಲ್ಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ’ಎಂದು ಮಾಹಿತಿ ನೀಡಿದರು.
‘ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.