ಬೆಂಗಳೂರು: ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳು ಹಾಗೂ ಮಹದಾಯಿ ಯೋಜನೆಗೆ ಸಂಬಂಧಿಸಿದ ಅಂತರ ರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಫೆಬ್ರುವರಿ ಮೊದಲ ವಾರ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಂತರ ರಾಜ್ಯ ಜಲ ವಿವಾದಗಳಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲರ ಜತೆ ಶನಿವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ಕಾನೂನು ತಜ್ಞರ ಜತೆ ವಿಡಿಯೊ ಸಂವಾದ ನಡೆಸಲಾಗುವುದು. ಬಳಿಕ ವಿಧಾನ ಮಂಡಲದ ಉಭಯ ಸದನಗಳ ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು’ ಎಂದರು.
ಕೃಷ್ಣಾ, ಕಾವೇರಿ ಜಲಾನಯನ ಪ್ರದೇಶಗಳು ಹಾಗೂ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ವಿವಿಧ ಹಂತಗಳಲ್ಲಿರುವ ಅಂತರ ರಾಜ್ಯ ಜಲ ವಿವಾದಗಳ ಕುರಿತು ಚರ್ಚೆ ನಡೆಸಲಾಗಿದೆ. ರಾಜ್ಯದ ಪರ ವಾದ ನಡೆಸುತ್ತಿರುವ ವಕೀಲರು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಹೇಳಿದರು.
‘ರಾಜ್ಯವು ಕಾನೂನು ಹೋರಾಟ ನಡೆಸುತ್ತಿರುವ ಎಲ್ಲ ಅಂತರ ರಾಜ್ಯ ಜಲ ವಿವಾದಗಳಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ಮತ್ತೊಮ್ಮೆ ವಿಡಿಯೊ ಸಂವಾದ ನಡೆಸುತ್ತೇನೆ. ಆ ಸಭೆಗೂ ಮೊದಲು ಸಿದ್ಧತೆ ಮಾಡಿಕೊಂಡು, ಕೆಲವು ಸಲಹೆಗಳನ್ನು ನೀಡುವುದಾಗಿ ವಕೀಲರು ತಿಳಿಸಿದ್ದಾರೆ’ ಎಂದರು.
ನಿಲುವಿನ ಕುರಿತು ಚರ್ಚೆ: ‘ನಾವು ವಿರೋಧ ಪಕ್ಷದಲ್ಲಿದ್ದಾಗ ನೆಲ, ಜಲದ ವಿಷಯ ಬಂದಾಗ ಸಂಪೂರ್ಣ ಸಹಕಾರ ನೀಡಿದ್ದೇವೆ. ಈಗ ಕೆಲವು ಕಾನೂನು ಹೋರಾಟಗಳು ಪ್ರಮುಖ ಘಟ್ಟಕ್ಕೆ ಬಂದಿವೆ. ಈ ಕಾರಣದಿಂದ ಹೇಗೆ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸಲು ಮತ್ತೊಮ್ಮೆ ವಿರೋಧ ಪಕ್ಷಗಳ ನಾಯಕರು ಮತ್ತು ಕಾನೂನು ಪರಿಣಿತರ ಜತೆ ಚರ್ಚಿಸಲು ಫೆಬ್ರುವರಿ ಮೊದಲ ವಾರ ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ’ ಎಂದು ಬೊಮ್ಮಾಯಿ ತಿಳಿಸಿದರು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿರಿಯ ವಕೀಲರಾದ ಶ್ಯಾಮ್ ದಿವಾನ್, ಮೋಹನ ಕಾತರಕಿ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.