ADVERTISEMENT

ಎಸ್‌ಐಟಿ ವ್ಯಾಪ್ತಿಗೆ ಧರ್ಮಸ್ಥಳದ ಎಲ್ಲ ಪ್ರಕರಣ ತನ್ನಿ: ಸಮಾನ ಮನಸ್ಕರ ಸಭೆ

ಸಮಾನ ಮನಸ್ಕರ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 0:01 IST
Last Updated 22 ಆಗಸ್ಟ್ 2025, 0:01 IST
<div class="paragraphs"><p>ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯ</p></div>

ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯ

   

–ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ಪದ್ಮಲತಾ, ವೇದವಲ್ಲಿ, ಸೌಜನ್ಯಾ, ಯಮುನಾ, ನಾರಾಯಣ ಮುಂತಾದವರ ನಾಪತ್ತೆ, ಕೊಲೆ ಪ್ರಕರಣಗಳನ್ನು ಎಸ್‌ಐಟಿ ವ್ಯಾಪ್ತಿಗೆ ತರಬೇಕು ಎಂದು ಸಮಾನ ಮನಸ್ಕರು ಒತ್ತಾಯಿಸಿದ್ದಾರೆ.

ADVERTISEMENT

ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾನ ಮನಸ್ಕರ ವಿವಿಧ ಸಂಘಟನೆಗಳ ಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

20 ವರ್ಷಗಳಿಂದ ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ, ಶವ ಹೂತಿಟ್ಟ ಪ್ರಕರಣ, ಹುಡುಗಿಯರ ನಾಪತ್ತೆ ಪ್ರಕರಣಗಳನ್ನು ಎಸ್‌ಐಟಿಗೆ ಒಪ್ಪಿಸಿರುವುದು ಸ್ವಾಗತಾರ್ಹ. ಬಿಜೆಪಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಎಸ್‌ಐಟಿ ತನಿಖೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿವೆ. ದೂರುದಾರರನ್ನು, ಸಾಕ್ಷಿದಾರರನ್ನು ಬೆದರಿಸಲಾಗುತ್ತಿದೆ. ಒತ್ತಡಕ್ಕೆ ಮಣಿಯದೇ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಲಾಯಿತು.

ಜನಚಳವಳಿಯ ಆಗ್ರಹಕ್ಕೂ ದೂರುದಾರರು, ಸಾಕ್ಷಿದಾರರಿಗೂ ಸಂಬಂಧವಿಲ್ಲ. ಆದರೆ, ದೂರುದಾರರಿಗೆ, ಸಾಕ್ಷಿದಾರರಿಗೆ ನೈತಿಕ ಬೆಂಬಲವನ್ನು ಜನಚಳವಳಿಗಳು ನೀಡುತ್ತಿವೆ. ದೂರುದಾರರಿಗೆ ನ್ಯಾಯ ಸಿಗುವವರೆಗೂ ಜನಚಳವಳಿಗಳ ಹೋರಾಟ ಮುಂದುವರಿಸಲು ಎಂದು ನಿರ್ಣಯಿಸಲಾಯಿತು.

ಸ್ಥಳೀಯ ಫ್ಯೂಡಲ್ ಶಕ್ತಿಗಳ ಅಲಿಖಿತ ನಿಯಮವನ್ನು ಮುರಿದು ಸಿಪಿಐ ಮುಖಂಡ ಎಂ.ಕೆ. ದೇವಾನಂದ ಮಂಡಲ ಪಂಚಾಯಿತಿಗೆ ಸ್ಪರ್ಧಿಸಿದ್ದು, ಮಲೆಕುಡಿಯರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಚಳವಳಿ ಕಟ್ಟಿದ್ದೇ ಅವರ ಮಗಳು ಪದ್ಮಲತಾ ಕೊಲೆಗೆ ಕಾರಣವಾಗಿದೆ ಎಂದು ದೇವಾನಂದರು ಸಾಯುವವರೆಗೂ ಹೇಳುತ್ತಾ ಬಂದಿದ್ದರು. ಆದರೂ ನ್ಯಾಯ ಸಿಕ್ಕಿಲ್ಲ. ಎಸ್‌ಡಿಎಂ ಅನುದಾನಿತ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದ ವೇದವಲ್ಲಿ ಅವರು ಮುಖ್ಯೋಪಾಧ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಮಾವುತ ನಾರಾಯಣ, ಅವರ ಸೋದರಿ ಯಮುನಾ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಪ್ರಕರಣ ಮುಚ್ಚಿ ಹಾಕಲಾಗಿದೆ. ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿಯೂ ನೈಜ ಆರೋಪಿಗಳ ಪತ್ತೆಯಾಗಿಲ್ಲ. ಇವುಗಳನ್ನು ಎಸ್‌ಐಟಿ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಲಾಯಿತು.

‘ಅಶೋಕನಗರ ಕಾಲೊನಿಯ ದಲಿತರಿಗೆ ಹಕ್ಕುಪತ್ರ ನೀಡಿಲ್ಲ. ಅಲ್ಲಿಯ 128 ಕುಟುಂಬಗಳಿಗೆ ಮತ್ತು ಮುಂಡ್ರುಪಾಡಿಯ 42 ಕುಟುಂಬಗಳಿಗೆ ತಲಾ ಒಂದು ಎಕರೆ ಜಮೀನು ಒದಗಿಸಬೇಕು. ಸ್ವಚ್ಛತಾ ಕಾರ್ಮಿಕರಿಗೆ  ಕಾರ್ಮಿಕ ಕಾಯ್ದೆಯಂತೆ ಅವರಿಗೆ ವೇತನ ನೀಡುತ್ತಿಲ್ಲ. ದಲಿತರಿಗೆ ಮೀಸಲಾದ ಜಮೀನೂ ಸೇರಿದಂತೆ ನೂರಾರು ಎಕರೆ ಭೂಮಿ ಅತಿಕ್ರಮಿಸಿದ್ದನ್ನು ತೆರವುಗೊಳಿಸಿ ದಲಿತರಿಗೆ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಯಿತು.

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ನಡೆದ ಮೈಕ್ರೋಫೈನಾನ್ಸ್‌ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು. ಸ್ನಾನಘಟ್ಟದಲ್ಲಿ, ಲಾಡ್ಜ್‌ಗಳಲ್ಲಿ ಮೃತಪಟ್ಟವರ ಕುಟುಂಬದವರನ್ನು ಪತ್ತೆ ಹಚ್ಚಲು ಪ್ರಯತ್ನಿಸದೇ ಕೂಡಲೇ ಹೂಳಲು ಪೊಲೀಸರು ತಿಳಿಸಿರುವ ಪ್ರಕರಣಗಳು ಅನುಮಾನಕ್ಕೆ ಕಾರಣವಾಗಿವೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.