ADVERTISEMENT

ಕಾಂಗ್ರೆಸ್‌ ಸರ್ಕಾರದ ಹಗರಣಗಳ ತನಿಖೆ: ಬಿಜೆಪಿ ಸಭೆಯಲ್ಲಿ ಚರ್ಚೆ

ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 23:02 IST
Last Updated 4 ಸೆಪ್ಟೆಂಬರ್ 2022, 23:02 IST
ಬಿಜೆಪಿ ಸಭೆಯ ಸಾಂದರ್ಭಿಕ ಚಿತ್ರ
ಬಿಜೆಪಿ ಸಭೆಯ ಸಾಂದರ್ಭಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧದ ಶೇಕಡ 40 ರಷ್ಟು ಲಂಚದ ಆರೋಪವನ್ನು ಎದುರಿಸಲು ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿ ಯಲ್ಲಿ ನಡೆದಿರುವ ಹಗರಣಗಳನ್ನು ಪತ್ತೆ ಮಾಡಿ ತನಿಖೆಗೆ ಆದೇಶಿಸುವ ಕುರಿತು ಭಾನುವಾರ ನಡೆದ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಭೆಯಲ್ಲಿ ಚರ್ಚೆ ನಡೆಯಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಸಭೆಯ ನೇತೃತ್ವ ವಹಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕ ಜಗದೀಶ ಶೆಟ್ಟರ್‌, ಸಂಸದ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಜೆ.ವಿ., ಸಚಿವರಾದ ಗೋವಿಂದ ಕಾರಜೋಳ, ಆರ್‌. ಅಶೋಕ ಮತ್ತು ಶಾಸಕ ಕೆ.ಎಸ್‌. ಈಶ್ವರಪ್ಪ ಸಭೆಯಲ್ಲಿದ್ದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿ.ಟಿ. ರವಿ, ‘ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ ನಡೆದ ಅನೇಕ ಹಗರಣಗಳನ್ನು ಮುಚ್ಚಿ ಹಾಕಲಾಗಿದೆ. ಅಂತಹ ಹಗರಣಗಳನ್ನು ಬಯಲಿಗೆಳೆದು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಸಭೆ
ಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ’ ಎಂದರು.

ADVERTISEMENT

ಚುನಾವಣಾ ಸಿದ್ಧತೆ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಜನಸಂವಾದ, ಜನೋತ್ಸವ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ನಡೆಸುವ ಕುರಿತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸುವ ಕಾರ್ಯಕ್ರಮವನ್ನೂ ರೂಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಈ ಕಾರ್ಯಕ್ರಮ ಯಶಸ್ವಿಗೊಳಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ ಎಂದು ಹೇಳಿದರು.

2018ರ ಚುನಾವಣೆಯ ತಯಾರಿಯ ಮಾದರಿಯಲ್ಲೇ 2023ರ ವಿಧಾನಸಭಾ ಚುನಾವಣೆಯ ಸಿದ್ಧತೆ ಆರಂಭಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಹಿಂದಿನ ಚುನಾವಣೆಯ ಮುನ್ನ ನಡೆಸಿದ್ದ ಪರಿವರ್ತನಾ ಯಾತ್ರೆಯಂತಹ ಕಾರ್ಯಕ್ರಮಗಳನ್ನು ರೂಪಿಸುವ ನಿರ್ಧಾರ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸೆ.17ರಿಂದ ಸೇವಾ ಪಾಕ್ಷಿಕ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್‌ 17 ರಿಂದ ರಾಜ್ಯದಾದ್ಯಂತ ಸೇವಾ ಪಾಕ್ಷಿಕ ನಡೆಸಲು ಭಾನುವಾರ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ.

‘ಸೆ.17ರಂದು ಪ್ರಧಾನಿಯವರ ಜನ್ಮದಿನ. ಸೆ.25 ರಂದು ಜನಸಂಘದ ನಾಯಕರಾಗಿದ್ದ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನ. ಅಕ್ಟೋಬರ್‌ 2 ರಂದು ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನ. ಈ ಪ್ರಯುಕ್ತ ಸೆ.17 ರಿಂದ ಅ.2ರವರೆಗೂ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.

ಈ ಅವಧಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ರಕ್ತದಾನ ಶಿಬಿರ, ಜಲಮೂಲಗಳ ಸ್ವಚ್ಛತೆ, ಗಿಡಗಳನ್ನು ನೆಡುವುದು, ಅಂಗವಿಕಲರಿಗೆ ಅಗತ್ಯ ಸಾಧನಗಳ ವಿತರಣೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.