ADVERTISEMENT

ಕೆಸಿಎಸ್‌ಆರ್ ನಿಯಮದ ಪ್ರಕಾರ ನಿವೃತ್ತರ ತನಿಖೆಗೆ ಅವಕಾಶವಿಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 18:27 IST
Last Updated 29 ನವೆಂಬರ್ 2022, 18:27 IST
   

ಬೆಂಗಳೂರು: ‘ಕರ್ನಾಟಕ ನಾಗರಿಕ ಸೇವೆಗಳ ಅಧಿನಿಯಮದ (ಕೆಸಿಎಸ್‌ಆರ್) ನಿಯಮ 214ರ (2)(ಬಿ)(ಜಿಜಿ) ಅನುಸಾರ ನಾಲ್ಕು ವರ್ಷಗಳಿಗೂ ಹಿಂದಿನ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನೌಕರರ ವಿರುದ್ಧ ತನಿಖೆ ನಡೆಸಲು ಅವಕಾಶವಿಲ್ಲ‘ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಕರ್ನಾಟಕ ಗೃಹ ಮಂಡಳಿಯ (ಕೆಎಚ್‌ಬಿ) ನಿವೃತ್ತ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ಅನಿಲ್ ಕುಮಾರ್, ಟಿ.ಮಲ್ಲಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಮಾನ್ಯ ಮಾಡಿದೆ. ಅರ್ಜಿದಾರರ ವಿರುದ್ಧದ ಚಾರ್ಜ್ ಮೆಮೊ ಹಾಗೂ ಹಾಗೂ ತನಿಖೆಗೆ ಅಧಿಕಾರಿ ನೇಮಕ ಮಾಡಿದ್ದ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣವೇನು?: ಕೆಎಚ್‌ಬಿಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಿಲ್ ಕುಮಾರ್ ಹಾಗೂ ಮಲ್ಲಣ್ಣ ಕ್ರಮವಾಗಿ 2018ರ ಜೂನ್‌ 30 ಹಾಗೂ 2020ರ ಆಗಸ್ಟ್ 31ರಂದು ನಿವೃತ್ತರಾಗಿದ್ದರು. ಏತನ್ಮಧ್ಯೆ 2006ರಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ 2022ರ ಜೂನ್ 21ರಂದು ಆರೋಪದ ಜ್ಞಾಪನಾ ಪತ್ರ (ಮೆಮೊ) ಜಾರಿಗೊಳಿಸಲಾಗಿತ್ತು. ತನಿಖೆ ನಡೆಸಲು ಆಗಸ್ಟ್‌ 8ರಂದು ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಅರ್ಜಿದಾರರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.